ಮಡಿಕೇರಿ, ಫೆ. 4: ಕೊಡಗು ಪ್ಯಾಕೆಜ್ ಅನುದಾನ ಹಾಗೂ ಪ್ರಕೃತಿ ವಿಕೋಪದ ಅನುದಾನ ಮತ್ತು ಲೋಕೊಪಯೋಗಿ ಇಲಾಖೆಯ ಅನುದಾನದಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಕಾಮಗಾರಿಯು ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ತಾಲೂಕಿನ ಕೆ. ಬೋಯಿಕೇರಿ-ಕೆದಮುಳ್ಳೂರು, ಕರಡ ರಸ್ತೆ ಕಾಮಗಾರಿಗೆ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯಿಂದ ರೂ, 54,79 ಲಕ್ಷದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಚೆಂಬೆಬೆಳ್ಳೂರು ಪಂಚಾಯಿತಿಯ ಬೆಳ್ಳರಿಮಾಡು ಗ್ರಾಮದಲ್ಲಿ ವಿಶೇಷ ಘಟಕದ ಯೊಜನೆಯಡಿ ರೂ. 10 ಲಕ್ಷದಲ್ಲಿ ನಡೆದ ಕಾಂಕ್ರಿಟ್ ರಸ್ತೆ ಹಾಗೂ ಅಲ್ಲಿನ ಕಾಲೋನಿಗಳಿಗೆ ರೂ. 30 ಲಕ್ಷದ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಣ್ಣಂಗಾಲದಿಂದ ಸಿದ್ದಾಪುರ ರಸ್ತೆಗೆ ರೂ. 70 ಲಕ್ಷದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ಸರಕಾರದಿಂದ ಬಂದ ಅನುದಾನದಲ್ಲಿ ಹೆಚ್ಚು ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿ ಕಾಮಗಾರಿ ನಡೆಯುವ ಸಂದರ್ಭ ಕಳಪೆಯಾಗದಂತೆ ಗ್ರಾಮಸ್ಥರು ನೋಡಿಕೊಳ್ಳುವಂತೆ ಶಾಸಕರು ಹೇಳಿದರು.
ಭೂಮಿಪೂಜೆ ಮತ್ತು ರಸ್ತೆ ಉದ್ಘಾಟನೆ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಮುಕೊಂಡ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಗ್ರಾಮಸ್ಥರಾದ ರಾಜ ನಂಜಪ್ಪ, ಪುಟ್ಟಿಚಂಡ ಅಯ್ಯಣ್ಣ, ಸುಬ್ರಮಣಿ, ಕೊಕ್ಕಲೆಮಾಡ ತನು ತಿಮ್ಮಯ್ಯ, ಮಲ್ಲಂಡ ಮಧುದೇವಯ್ಯ, ಜೋಕಿಂ ರಾಡ್ರಿಗಾಸ್, ಪಿ. ವಿಷ್ಣು, ಕಣ್ಣಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ನಿತೀನ್, ಮಾಜಿ ಸದಸ್ಯೆ ಬಿ.ಎಸ್. ರೇಖಾ ಹಾಗೂ ಗ್ರಾಮಸ್ಥರುಗಳು ಭಾಗವಹಿಸಿದ್ದರು.