ಮಡಿಕೇರಿ, ಫೆ. 4: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನವಿರುವ ಬಹಳಷ್ಟು ದೇವಾಲಯಗಳನ್ನು; ಹಾಲೀ ಸರಕಾರ ಮರೆತು ಹೋಗಿದೆ ಎಂದು ಅಸಮಾಧಾನ ವ್ಯಕ್ತಗೊಳ್ಳುವಂತಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಕೊಡಗಿನ ಐತಿಹಾಸಿಕ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಪಾಲೂರು ಶ್ರೀ ಹರಿಶ್ಚಂದ್ರ ದೇವಾಲಯ, ಐತಿಹಾಸಿಕ ಪ್ರವಾಸಿ ತಾಣವಿರುವ ಇರ್ಪು ಶ್ರೀ ರಾಮೇಶ್ವರ ದೇವಾಲಯ ಮತ್ತು ಇಲ್ಲಿನ ರಾಜರ ಗದ್ದುಗೆಗಳು ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಈಗಾಗಲೇ ಇಲಾಖೆಗೆ ಸಂಬಂಧಿಸಿರುವ ಕೊಡಗಿನ ಪ್ರಸಿದ್ಧ ಶ್ರೀ ತಲಕಾವೇರಿ - ಭಾಗಮಂಡಲ ಕ್ಷೇತ್ರ; ಇಲ್ಲಿನ ಓಂಕಾರೇಶ್ವರ ಮತ್ತು ಕೋಟೆ ಗಣಪತಿ - ಆಂಜನೇಯ ಸನ್ನಿಧಿಗಳನ್ನು ಒಳಗೊಂಡಂತೆ ಮತ್ತು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಗಳನ್ನು ಸರಕಾರದಿಂದ ರಚಿಸಲಾಗಿದೆ.
ಬದಲಾಗಿ ಕಡಿಮೆ ಆದಾಯವಿರುವ ಮೇಲಿನ ದೇವಾಲಯಗಳ ನಿರ್ವಹಣೆಗೆ ಸರಕಾರ ಸಮಿತಿಗಳನ್ನು ರಚಿಸದಿರುವದು ಭಕ್ತವೃಂದ ಮತ್ತು ಆಯ ಗ್ರಾಮಸ್ಥರಲ್ಲಿ ನೋವುಂಟು ಮಾಡಿದೆ ಎಂದು ಪಾಲೂರು ಹರಿಶ್ಚಂದ್ರ ದೇವಾಲಯ ಜೀರ್ಣೋದ್ಧಾರ ಸಮಿತಿ ಪ್ರಮುಖ ಬೊಳ್ಳಿಯಂಡ ಹರೀಶ್ ‘ಶಕ್ತಿ’ಯೊಂದಿಗೆ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಜಿಲ್ಲೆಯ ಮಟ್ಟಿಗೆ ಧಾರ್ಮಿಕ ಪರಿಷತ್ ಕೂಡ ಕಾರ್ಯನಿರ್ವ ಹಿಸುತ್ತಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.