ಮಡಿಕೇರಿ, ಫೆ.5: ಚೆಯ್ಯಂಡಾಣೆಯ 2773ನೇ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ, ರೂಪಾಯಿ ಒಂದು ಕೋಟಿ ಮೂವತ್ತೊಂದು ಲಕ್ಷದಷ್ಟು ಹಣ ದುರುಪಯೋಗ ಹಗರಣ ಸಂಬಂಧ, ಸಹಕಾರ ಇಲಾಖೆಯ ಅಧಿಕಾರಿಗಳ ವಿಳಂಬ ಧೋರಣೆಯಿಂದ ತನಿಖೆಗೆ ಹಿನ್ನೆಡೆಯಾಗಿದ್ದು, ತಪ್ಪಿತಸ್ಥ ಸಿಬ್ಬಂದಿ ಇನ್ನು ಕಾನೂನು ಕ್ರಮಕ್ಕೆ ಒಳಗಾಗಿಲ್ಲವೆಂದು ಸಂಬಂಧಿಸಿದ ಸಂಘದ ಅಧ್ಯಕ್ಷ ಪಿ.ಎಸ್. ಮಾದಪ್ಪ ಸ್ಪಷ್ಟಪಡಿಸಿದ್ದಾರೆ. ಹಗರಣ ಸಂಬಂಧ ಇಂದು ‘ಶಕ್ತಿ’ ವರದಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೆಲವು ಸಮಯದ ಹಿಂದೆ ಪತ್ರಿಕೆ ಬೆಳಕು ಚೆಲ್ಲಿದ ಬೆನ್ನಲ್ಲೇ ಆಡಳಿತ ಮಂಡಳಿಯಿಂದ ಸಹಕಾರ ಕಾಯ್ದೆ 64ರ ಅಡಿಯಲ್ಲಿ ತನಿಖೆಗೆ ಕೋರಿ ದೂರು ಸಲ್ಲಿಸಿದ್ದಾಗಿ ಬಹಿರಂಗಗೊಳಿಸಿದ್ದಾರೆ.ಅಲ್ಲದೆ, ಈ ಸಂಬಂಧ ಚೆಯ್ಯಂಡಾಣೆ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸಿ.ಎಂ. ಗೋಪಿ ಹಾಗೂ ಸಿಬ್ಬಂದಿಗಳಾದ ಸಿ.ಕೆ. ಚಂಗಪ್ಪ, ಬಿ.ಎಸ್. ಅಯ್ಯಪ್ಪ, ಪಿ.ಕೆ. ಉಮಾವತಿ ವಿರುದ್ಧ ಜಿಲ್ಲಾ ಅಪರಾಧ ಪತ್ತೆದಳಕ್ಕೂ ಪ್ರತ್ಯೇಕ ದೂರು ಸಲ್ಲಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಸಕಾಲದಲ್ಲಿ ಸಹಕಾರ ಇಲಾಖೆಯಿಂದ ಉಪನಿಬಂಧಕರು ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸದೆ ವಿಳಂಬ ನೀತಿ ಅನುಸರಿಸಿದ್ದಾಗಿ ಮಾದಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.ಸಹಕಾರ ಸಂಘದ ದೈನಂದಿನ ವ್ಯವಹಾರಗಳನ್ನು ಗಮನಿಸಬೇಕಿದ್ದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಯೇ ಕರ್ತವ್ಯ ನಿರ್ಲಕ್ಷ್ಯದೊಂದಿಗೆ, ಸಿಬ್ಬಂದಿಗಳನ್ನು ಬಳಸಿಕೊಂಡು ‘ಬೇಲಿಯೇ ಎದ್ದು

(ಮೊದಲ ಪುಟದಿಂದ) ಹೊಲವನ್ನು ಮೇಯ್ದಂತೆ’ ಇಲ್ಲಿ ದುರುಪಯೋಗದೊಂದಿಗೆ ಆಡಳಿತ ಮಂಡಳಿಗೆ ನಂಬಿಕೆ ದ್ರೋಹ ಎಸಗಿರುವದಾಗಿದೆ ಎಂದು ಅಧ್ಯಕ್ಷ ಮಾದಪ್ಪ ಹಗರಣ ಕುರಿತು ವಿವರಿಸಿದ್ದಾರೆ.

‘ಶಕ್ತಿ’ ವರದಿ ಫಲಶೃತಿ: ಚೆಯ್ಯಂಡಾಣೆ ಪತ್ತಿನ ಸಹಕಾರ ಸಂಘದಲ್ಲಿ ಖರೀದಿಸುತ್ತಿದ್ದ ಗೊಬ್ಬರ ದಾಸ್ತಾನು ಗೋದಾಮುವಿನಲ್ಲಿ ಇರಿಸದೆ, ನೇರವಾಗಿ ದುರ್ಬಳಕೆ ಯೊಂದಿಗೆ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಮತ್ತು ಸಿಬ್ಬಂದಿ ಆಡಳಿತ ಮಂಡಳಿಗೆ ವಂಚಿಸಿರುವದು ‘ಶಕ್ತಿ’ ವರದಿಯ ಬಳಿಕ ಪರಿಶೀಲನೆ ವೇಳೆ ಬೆಳಕಿಗೆ ಬಂದಿದ್ದಾಗಿ ಅವರು ನೆನಪಿಸಿದ್ದಾರೆ. ಆ ಬೆನ್ನಲ್ಲೇ ತಾವು ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿರುವದಾಗಿ ಸ್ಪಷ್ಟಪಡಿಸಿ ದ್ದಾರೆ.

ಪ್ರಸಕ್ತ ದಿನಗಳವರೆಗೆ ಕ್ರಮ ಜರುಗಿಸದೆ ಜನವಲಯದಲ್ಲಿ ಅಸಮಾಧಾನ ಮೂಡಿರುವ ಸಂದರ್ಭ, ಮತ್ತೊಮ್ಮೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕಾಯಿತು ಎಂದ ಮಾದಪ್ಪ, ಇನ್ನಾದರೂ ಪೊಲೀಸ್ ಇಲಾಖೆ ಮತ್ತು ಸಹಕಾರಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರು ಹಾಗೂ ವಿಶೇಷವಾಗಿ ಬೆಳೆಗಾರರ ಹಣ ದುರುಪಯೋಗ ಎಸಗಿರುವ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ, ಜನತೆಯ ಹಣವನ್ನು ತಪ್ಪಿತಸ್ಥರಿಂದ ವಸೂಲಿಗೆ ಕಾಳಜಿ ವಹಿಸಿ, ಸಂಘಕ್ಕೆ ನಷ್ಟ ತುಂಬಿಕೊಡು ವಲ್ಲಿ ಮುಂದಾಗುವಂತೆ ಕಳಕಳಿ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಈ ಹಿಂದೆ ದೂರು ಸಲ್ಲಿಸಿದಾಗ, ಲೆಕ್ಕ ತಪಾಸಣಾ ವರದಿ ಪರಿಶೀಲಿಸಿ ಅನಂತರ ಕ್ರಮ ಜರುಗಿಸಲಾಗುವದು ಎಂದು ಇಲಾಖಾಧಿಕಾರಿಗಳು ನೀಡಿದ ಭರವಸೆಯಂತೆ, ಸಂಬಂಧಿಸಿದ ವರದಿ ಲಭಿಸಿದ ಮೇರೆಗೆ ಆಡಳಿತ ಮಂಡಳಿ ಮಹಾಸಭೆಯ ನಿರ್ಣಯದಂತೆ ಕಾನೂನು ಸಮರಕ್ಕೆ ಮುಂದಾಗಿದೆ ಎಂದು ಅಧ್ಯಕ್ಷರು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.