ಸೋಮವಾರಪೇಟೆ, ಫೆ. 5: ಗ್ರಾಮೀಣ ಮಹಿಳೆಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದಿದ್ದು, ಮಹಿಳೆಯರು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ತಾಲೂಕಿನ ಮಾದಾಪುರದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಐಗೂರಿನ ಪಾರ್ವತಿ ಹೆಚ್.ಪಿ. ಗ್ಯಾಸ್ ವತಿಯಿಂದ ಉಜ್ವಲ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ ಮತ್ತು ಎಲ್‍ಪಿಜಿ ಪಂಚಾಯತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೌದೆ ಬಳಸಿ ಮಹಿಳೆಯರು ಅಡುಗೆ ಮಾಡುವ ಸಂದರ್ಭ ಹೆಚ್ಚಿನ ಹೊಗೆ ಸೇವನೆಯಾಗಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಅಲ್ಲದೆ, ಸೌದೆ ಬಳಸುವದರಿಂದ ಕಾಡು ನಾಶವಾಗುವದರೊಂದಿಗೆ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುವದನ್ನು ಮನಗಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.

ಪಾರ್ವತಿ ಗ್ಯಾಸ್ ಸಂಸ್ಥೆಯ ಮುರಳೀಧರ್ ಮಾತನಾಡಿ, ಉಜ್ವಲ ಯೋಜನೆ ಜಾರಿಯಾದ ನಂತರ ದೇಶದಲ್ಲಿ ಸುಮಾರು 8 ಕೋಟಿ ಕುಟುಂಬಗಳು ಯೋಜನೆಯ ಸದುಪಯೋಗ ಪಡಿಸಿಕೊಂಡಿದ್ದಾರೆ. ಯೋಜನೆ ಯಡಿ ಎಲ್ಲಾ ಬಡವರೂ ಸೌಲಭ್ಯ ಪಡೆಯಬಹುದಾಗಿದೆ.

ಇದಕ್ಕಾಗಿ ತಮ್ಮ ಪಡಿತರ ಚೀಟಿ, ಆಧಾರ್ ಕಾರ್ಡ್ ನಕಲು ಹಾಗೂ ಮೂರು ಭಾವಚಿತ್ರದೊಂದಿಗೆ ತಮ್ಮ ಸಮೀಪದ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭ ಗ್ರಾಹಕರಿಗೆ ಸುರಕ್ಷಿತವಾಗಿ ಗ್ಯಾಸ್ ಬಳಸುವ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ಸತೀಶ್ ಪ್ರಾತ್ಯಕ್ಷಿತೆ ನೀಡಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ನಾಪಂಡ ಉಮೇಶ್, ಮಜೀದ್, ಪ್ರೇಮ, ಶಾಂತ, ಇಬ್ರಾಹಿಂ ಸೀದಿ, ಬೆಳ್ಳಿಯಪ್ಪ, ಭಾಗೀರಥಿ ಸೇರಿದಂತೆ ಇತರರು ಉಪಸ್ಥಿತರಿದ್ದರು.