ಪಾಕ್ನಿಂದ ಕದನ ವಿರಾಮ ಉಲ್ಲಂಘನೆ
ಶ್ರೀನಗರ, ಫೆ. 5: ಪಾಕಿಸ್ತಾನ ಸೇನೆ ಮಂಗಳವಾರ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ರಾಕೆಟ್ ಲಾಂಚರ್ಸ್ ನಿಂದ ಎರಡು ಸುತ್ತು ಗುಂಡು ಹಾರಿಸಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಭಾರತೀಯ ಯೋಧರು, ಪಾಕ್ ಸೇನೆಯ ಅಪ್ರಚೋದಿತ ಗುಂಡಿನ ಧಾಳಿಗೆ ಯಾವದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ 10.30ರ ಸುಮಾರಿಗೆ ಕೃಷ್ಣ ಘಾಟಿ ಸೆಕ್ಟರ್ನ ಸೇನಾ ಕ್ಯಾಂಪ್ ಗುರಿಯಾಗಿಸಿಕೊಂಡು ರಾಕೇಟ್ ಧಾಳಿ ನಡೆಸಲಾಗಿದೆ. ಆದರೆ ಯಾವದೇ ಪ್ರಾಣಹಾನಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಹೊಸ ವರ್ಷ ಆರಂಭವಾದಾಗಿನಿಂದಲೂ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಜನವರಿ 1 ರಂದು ಪೂಂಚ್ ಸೆಕ್ಟರ್ನಲ್ಲಿ ಅಪ್ರಚೋದಿತ ಗುಂಡಿನ ಧಾಳಿ ನಡೆಸಿತ್ತು.
ಧರಣಿ ಕೈಬಿಟ್ಟ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಫೆ. 5: ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ಸಿಬಿಐ ಅಧಿಕಾರಿಗಳು ಕೋಲ್ಕತ್ತಾ ನಗರ ಪೆÇಲೀಸ್ ಆಯುಕ್ತರನ್ನು ತನಿಖೆ ನಡೆಸುವದರ ವಿರುದ್ಧ ಧರಣಿ ಪ್ರಾರಂಭಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ತೀರ್ಪಿನ ಹಿನ್ನೆಲೆ ಮಂಗಳವಾರ ತಮ್ಮ ಧರಣಿಯನ್ನು ಕೈಬಿಟ್ಟಿದ್ದಾರೆ. ಸುಪ್ರೀಂ ಕೋರ್ಟ್ನ ಆದೇಶದ ಬಳಿಕ ವಿರೋಧ ಪಕ್ಷಗಳ ನಾಯಕರನ್ನು ಸಂಪರ್ಕಿಸಿ ಮಾತನಾಡಿದ್ದು ಇದೀಗ ನಾನು ಧರಣಿ ನಿಲ್ಲಿಸಿದ್ದೇನೆ ಮಮತಾ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಭಾನುವಾರ ರಾತ್ರಿಯಿಂದ ಎಸ್ಪ್ಲಾನೇಡ್ ಪ್ರದೇಶದ ಮೆಟ್ರೋ ಚಾನಲ್ನಲ್ಲಿ ಕೇಂದ್ರ ಸರ್ಕಾರ ಹಾಗೂ ಸಿಬಿಐ ವಿರುದ್ಧ ಧರಣಿ ಕುಳಿತಿದ್ದರು. ಈ ವೇಳೆ ಆಂಧ್ರದ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ಆರ್ಜೆಡಿಯ ತೇಜಸ್ವಿ ಯಾದವ್ ಹಾಗೂ ಡಿಎಂಕೆ ನಾಯಕಿ ಕನಿಮೋಳಿ ಮಮತಾ ಅವರನ್ನು ಭೇಟಿಯಾಗಿದ್ದರು. ಇಂದು ಬೆಳಿಗ್ಗೆ ಸಿಬಿಐ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೋಲ್ಕತ್ತಾ ನಗರ ಪೆÇಲೀಸ್ ಆಯುಕ್ತ ರಾಜೀವ್ ಕುಮಾರ್ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಬೇಕು. ಶಾರದಾ ಹಗರಣ ಸಂಬಂಧದ ವಿಚಾರಣೆಗೆ ಸಹಕರಿಸಬೇಕು ಎಂದು ಆದೇಶಿಸಿದೆ. ಇದೇ ವೇಳೆ ಸಿಬಿಐ ಎಂದೂ ಅವರನ್ನು ಬಂಧಿಸುವಂತೊ ಇಲ್ಲ ಎಂದು ಸಹ ಕೋರ್ಟ್ ನಿರ್ದೇಶಿಸಿದೆ.
ಶಾಸಕರಿಗೆ ವಿಪ್ ನೀಡಿದ ಬಿಜೆಪಿ-ಕಾಂಗ್ರೆಸ್
ಬೆಂಗಳೂರು, ಫೆ. 5: ರಾಜ್ಯ ಬಜೆಟ್ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆಪರೇಷನ್ ಕಮಲದ ಭೀತಿಯಿಂದ ಪಾರಾಗಲು ಕಾಂಗ್ರೆಸ್ ತನ್ನ ಎಲ್ಲಾ ಶಾಸಕರಿಗೆ ಇ-ಮೇಲ್ ಹಾಗೂ ವಾಟ್ಸಪ್ ಮೂಲಕ ವಿಪ್ ಜಾರಿ ಮಾಡಿದೆ. ಕಾಂಗ್ರೆಸ್ ಶಾಸಕರಿಗೆ ಕಡ್ಡಾಯವಾಗಿ ವಿಧಾನಸಭೆಗೆ ಹಾಜರಾಗುವಂತೆ ಪಕ್ಷದ ಶಾಸಕರಿಗೆ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ವಿಪ್ ಜಾರಿಗೊಳಿಸಿದ್ದಾರೆ. ತಾ. 6 ರಿಂದ 15 ರವರೆಗೆ ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಸಭಾಕ್ಷರು ಕಲಾಪ ಆರಂಭಿಸಿ ಅಂತ್ಯಗೊಳಿಸುವವರೆಗೆ ಆಡಳಿತ ಪಕ್ಷದ ಎಲ್ಲಾ ಶಾಸಕರು ಕಡ್ಡಾಯವಾಗಿ ಉಪಸ್ಥಿತರಿದ್ದು, ಸರ್ಕಾರದ ಪರ ಮತ ಚಲಾಯಿಸುವಂತೆ ವಿಪ್ ಜಾರಿಮಾಡಲಾಗಿದೆ. ಒಂದುವೇಳೆ ವಿಪ್ ಉಲ್ಲಂಘಿಸಿ, ಸದನಕ್ಕೆ ಗೈರು ಹಾಜರಾದರೆ ಅಂತಹ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಲಾಗುವದು ಎಚ್ಚರಿಕೆ ನೀಡಲಾಗಿದೆ. ಇನ್ನು ಬಿಜೆಪಿ ಸಹ ತನ್ನ ಎಲ್ಲಾ ಶಾಸಕರು ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಆದರೆ ಜೆಡಿಎಸ್ ಮಾತ್ರ ವಿಪ್ ಜಾರಿ ವಿಚಾರದಲ್ಲಿ ನಿರಾಳವಾಗಿದೆ. ನಮ್ಮ ಶಾಸಕರ ಮೇಲೆ ನಂಬಿಕೆ ಇರೋದರಿಂದ ನಾವು ವಿಪ್ ಜಾರಿ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ
ನವದೆಹಲಿ, ಫೆ. 5: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಗಳವಾರ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಕೆಲಸ ಮುಂದುವರೆಸಲು ಉದ್ದೇಶಪೂರ್ವಕವಾಗಿಯೇ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಶಶಸ್ತ್ರ ಪೆÇಲೀಸ್ ಪಡೆಗಳು ಚುನಾವಣಾ ಕರ್ತವ್ಯದ ಮೇಲೆ ಇರುವದರಿಂದ ಎನ್ಆರ್ಸಿ ಪ್ರಕ್ರಿಯೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸಲು ಅನುಮತಿ ಕೋರಿ ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಎನ್ಆರ್ಸಿ ಪ್ರಕ್ರಿಯೆ ಮುಂದುವರೆಯಲು ಕೆಲ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಜುಲೈ 31ರ ಗಡುವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಸುಪ್ರೀಂ ಪೀಠ, ಕೇಂದ್ರ ಎನ್ಆರ್ಸಿ ಪ್ರಕ್ರಿಯೆಗೆ ಸಹಕಾರ ನೀಡುತ್ತಿಲ್ಲ ಮತ್ತು ಗೃಹ ಸಚಿವಾಲಯ ಎನ್ಆರ್ಸಿ ಪ್ರಕ್ರಿಯೆ ಸಂಪೂರ್ಣ ಹಾಳು ಮಾಡಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದೆ.
ಬಲೂನ್ ಸ್ಫೋಟ : ಸುತ್ತೂರು ಶ್ರೀ ಪಾರು
ಮೈಸೂರು, ಫೆ. 5: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ನೈಟ್ರೋಜನ್ (ಗ್ಯಾಸ್) ಬಲೂನ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಜಾತ್ರೆಯಲ್ಲಿ ಶ್ರೀಗಳು ಗ್ಯಾಸ್ ಬಲೂನ್ ಹಾರಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡುತ್ತಿದ್ದರು. ಆದರೆ ಶ್ರೀಗಳು ಬಲೂನ್ ಹಾರಿಸುವ ಮೊದಲೇ ಸ್ಫೋಟಗೊಂಡಿದೆ. ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಮತ್ತಿತರ ಗಣ್ಯರು ಕುಸ್ತಿ ಪಂದ್ಯಾವಳಿ ಉದ್ಘಾಟನೆ ಮಾಡುತ್ತಿದ್ದಾಗ ಪಕ್ಕದಲ್ಲೇ ಇದ್ದ ನೈಟ್ರೋಜನ್ ಬಲೂನ್ ದಿಢೀರನೆ ಸ್ಫೋಟವಾಗಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕ್ಷಣಮಾತ್ರದಲ್ಲಿ ಬಲೂನ್ ಸ್ಫೋಟವಾಗಿ ಬೆಂಕಿ ಸುತ್ತಲೂ ಆವರಿಸಿಕೊಂಡಿದೆ. ಸುತ್ತೂರು ಶ್ರೀಗಳಿಗೂ ಬೆಂಕಿ ತಗುಲಿದ್ದು, ಹೆಚ್ಚಿನ ಗಾಯಗಳಾಗಿಲ್ಲ. ಘಟನೆಯಲ್ಲಿ ಮರಿತಿಬ್ಬೇಗೌಡ, ಕಲಮಳ್ಳಿ ಶಿವಕುಮಾರ್, ಹೊಸಕೋಟೆ ದೇವಣ್ಣ ಮತ್ತು ಇತರ ಮೂವರಿಗೆ ಸಣ್ಣಪುಟ್ಟಗಾಯಗಳಾಗಿದ್ದು ಅವರಿಗೆ ಕೂಡಲೇ ಸುತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಅಣ್ಣಾ ಉಪವಾಸ ಸತ್ಯಾಗ್ರಹ 7ನೇ ದಿನಕ್ಕೆ
ರಾಳೇಗಣ್ ಸಿದ್ದಿ, ಫೆ. 5: ಲೋಕಾಪಾಲ ನೇಮಕಕ್ಕೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಅವರ ದೇಹ ತೂಕದಲ್ಲಿ 7 ಕೆ.ಜಿ. ಇಳಿಕೆಯಾಗಿದೆ. ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಣ್ಣಾ ಹಜಾರೆ ಅವರ ದೇಹ ತೂಕ ಕಡಿಮೆಯಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಸಕ್ಕರೆ ಅಂಶದ ಮಟ್ಟ ಕೂಡಾ ಕಡಿಮೆಯಾಗಿದೆ. ಉಪವಾಸ ಸತ್ಯಾಗ್ರಹವನ್ನು ಸ್ಥಗಿತಗೊಳಿಸುವಂತೆ ಸಲಹೆ ನೀಡಿದ್ದೇವೆ ಎಂದು ಡಾ. ಧನಂಜಯ್ ಪೆÇಟ್ ತಿಳಿಸಿದ್ದಾರೆ. ಕೇಂದ್ರದಲ್ಲಿ ಲೋಕಾಪಾಲ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಕ್ಕೆ ಆಗ್ರಹಿಸಿ ಜನವರಿ 30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ವೈದ್ಯರು ನೀಡಿದ ಓಆರ್ಎಸ್ ಅಥವಾ ಸಲೈನ್ ತೆಗೆದುಕೊಳ್ಳಲು 81 ವರ್ಷದ ಅಣ್ಣಾ ಹಜಾರೆ ನಿರಾಕರಿಸುತ್ತಿದ್ದಾರೆ. ಅವರು ಹೀಗೆಯೇ ಉಪವಾಸ ಸತ್ಯಾಗ್ರಹ ಮುಂದುವರೆಸಿದರೆ ಕಿಡ್ನಿಗಳು ಹಾಗೂ ಮೆದಳಿಗೆ ತೊಂದರೆಯಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಅಣ್ಣಾ ಹಜಾರೆ ಜೊತೆಗೆ ಇಡೀ ಹಳ್ಳಿಯ ಜನರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಯಾರೊಬ್ಬರೂ ಅಡುಗೆ ಮಾಡುತ್ತಿಲ್ಲ. ಅಣ್ಣಾ ಹಜಾರೆ ಅವರ ಬೇಡಿಕೆಗಳು ಈಡೇರದಿದ್ದಲ್ಲಿ ಎಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರಾಳೇಗಣ್ ಸಿದ್ದಿಯ ಉಪ ಮುಖಂಡ ಲಂಕೇಶ್ ಅವುಟಿ ಹೇಳಿದ್ದಾರೆ.