ಮಡಿಕೇರಿ, ಫೆ. 5: ತಲಕಾವೇರಿಯಲ್ಲಿ ತಾ.8 ರಂದು ಜ್ಯೋತಿಷ್ಯ ಪ್ರಶ್ನೆಯ ವಿಮರ್ಶಾ ವಿಶೇಷ ಕಾರ್ಯಕ್ರಮ ಏರ್ಪಟ್ಟಿದೆ.ಆ ದಿನ ದೇವಾಲಯ ಆವರಣದಲ್ಲಿ ಕೇರಳದ ಪಯ್ಯನೂರುವಿನ ಶ್ರೀ ನಾರಾಯಣ ಪೊದುವಾಳ್ ಅವರಿಂದ ಈ ಕಾರ್ಯಕ್ರಮ ನಡೆಯಲಿದೆ. ತಾ. 9.12.2018 ರಂದ 12.12.2018 ರವರೆಗೆ ಶ್ರೀ ತಲಕಾವೇರಿ ದೇವಾಲಯದಲ್ಲಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿರುವ ಪರಿಹಾರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ವಿಮರ್ಶೆ ಏರ್ಪಟ್ಟಿದೆ. ಅಲ್ಲದೆ ಮುಂದಿನ ಏಪ್ರಿಲ್‍ನಲ್ಲಿ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮ ಕಲಶ ಕಾರ್ಯಕ್ರಮವನ್ನು ನೆರವೇರಿಸಲು ಕ್ಷೇತ್ರ ತಂತ್ರಿಯವರು ನಿಗದಿಪಡಿಸಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ವಿಮರ್ಶೆ ನಡೆಯಲಿದೆ ಎಂದು ಶ್ರೀ ಭಗಂಡೇಶ್ವರ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿಎಸ್. ತಮ್ಮಯ್ಯ ತಿಳಿಸಿದ್ದಾರೆ.