ಚೆಟ್ಟಳ್ಳಿ, ಫೆ. 5: ಕುಶಾಲನಗರದ ಸಂತ ಸೆಬಾಸ್ಟಿಯನ್ ದೇವಾಲಯದ ವಾರ್ಷಿಕ ಮಹೋತ್ಸವವನ್ನು ಚರ್ಚ್‍ನ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ವಾರ್ಷಿಕೋತ್ಸವದ ಅಂಗವಾಗಿ ಹಬ್ಬದ ದಿವ್ಯ ಬಲಿಪೂಜೆಯನ್ನು ಚಿಕ್ಕಮಗಳೂರು ಧರ್ಮ ಕ್ಷೇತ್ರದ ಗುರುಗಳಾದ ಫಾ. ಶಾಂತರಾಜು ನೆರವೇರಿಸಿ ಪ್ರಭೋದನೆ ನೀಡಿದರು.

ಈ ಸಂದರ್ಭ ಸೆಬಾಸ್ಟಿಯನ್ ದೇವಾಲಯದ ಧರ್ಮಗುರುಗಳಾದ ವಂದನೀಯ ಫಾದರ್, ಮೈಕಲ್ ಮರಿ, ಕೊಡಗು ವಲಯ ಶ್ರೇಷ್ಠ ಗುರುಗಳಾದ ಫಾ. ಮದಲೈಮುತ್ತು, ಜಿಲ್ಲೆಯ ಎಲ್ಲಾ ಧರ್ಮಕೇಂದ್ರದ ಗುರುಗಳು ಹಾಗೂ ಕನ್ಯಸ್ತ್ರೀಯರು ಹಾಜರಿದ್ದರು.

ಬಲಿ ಪೂಜೆಯ ನಂತರ ವಿದ್ಯುತ್ ಅಲಂಕೃತ ತೇರಿನೊಂದಿಗೆ ಭಕ್ತಾದಿಗಳು ಮೇಣದ ಬತ್ತಿಗಳನ್ನು ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ದೇವಾಲಯವನ್ನು ಸೇರಿದರು. ಬಳಿಕ ಪರಮಪ್ರಸಾದದ ಆಶೀರ್ವಾದದೊಂದಿಗೆ ಮುಕ್ತಾಯವಾಗಿ ಎಲ್ಲರೂ ಸಹಭೋಜನದಲ್ಲಿ ಪಾಲ್ಗೊಂಡರು.