ಗೋಣಿಕೊಪ್ಪಲು, ಫೆ. 5 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಸೇವೆಗಾಗಿಯೇ ವಾರ್ಷಿಕ ಆಯವ್ಯಯದಲ್ಲಿ ನೂರಾರು ಕೋಟಿಲೆಕ್ಕದಲ್ಲಿ ಹಣವನ್ನು ಮೀಸಲಿಡುವದು ವಾಡಿಕೆ. ಆದರೆ, ಲೆಕ್ಕಾಚಾರ ‘ಬಜೆಟ್ ಸೂಟ್‍ಕೇಸ್’ಗೆ ಮಾತ್ರ ಸೀಮಿತ ಎಂಬಂತೆ ಗ್ರಾಮಾಂತರ ಪ್ರದೇಶಗಳಿಗೆ ತುರ್ತು ಆರೋಗ್ಯ ಸೇವೆ ತಲಪುವದೇ ಇಲ್ಲ. ಸರ್ಕಾರಿ ಆಸ್ಪತ್ರೆಯ ಸುಸೂತ್ರ ನಿರ್ವಹಣೆಗೆ ‘ರಕ್ಷಾಸಮಿತಿ’ ರಚನೆಯಾಗಿದ್ದರೂ ಹೆಚ್ಚಿನ ಆರೋಗ್ಯಕೇಂದ್ರಗಳಲ್ಲಿ ಸಮಿತಿ ನಿದ್ರಾವಸ್ಥೆಯಲ್ಲಿಯೇ ಇರುವದರಿಂದ ಗ್ರಾಮೀಣ ಭಾಗದ ಜನತೆ ತಮ್ಮ ಆರೋಗ್ಯ ರಕ್ಷಣೆಗಾಗಿ ದೂರದ ಆರೋಗ್ಯ ಕೇಂದ್ರಗಳನ್ನು ಅವಲಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಸಂದರ್ಭ ತುರ್ತು ಆರೋಗ್ಯ ಸೇವೆ ದೊರೆಯದ ಹಿನ್ನೆಲೆ ಸಾವು ನೋವು ಸಂಭವಿಸುವ ಪ್ರಕರಣಗಳೇ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಕಾನೂರಿನಲ್ಲಿರುವ ಸುಸಜ್ಜಿತ, ಸುಂದರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀವು ಹೋದಲ್ಲಿ ನಿರಾಶೆ ಖಚಿತ. ಅಲ್ಲಿ ವೈದ್ಯರಿಲ್ಲ, ಶುಶ್ರೂಷಕಿಯರಿಲ್ಲ, ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರಿಲ್ಲ, ಪುರುಷ ಸಹಾಯಕರಿಲ್ಲ, ಪ್ರಯೋಗಾಲಯ ತಂತ್ರಜ್ಞರಿಲ್ಲ... ಇದೆಲ್ಲಾ ಹೋಗಲಿ ನಿಮಗಾದ ಸಣ್ಣ ಗಾಯಕ್ಕೆ ಅಲ್ಲಿ ‘ಬ್ಯಾಂಡೇಜ್’ ಕಟ್ಟಲು ಯಾರು ಇಲ್ಲ! ಇಲ್ಲದ ಆಸ್ಪತ್ರೆಗೆ ನೀವು ಹೋದರೆ ಕಾಣಸಿಗುವದು ಕಾವಲುಗಾರನ ರಾಯಭಾರ! ‘ಏನಪ್ಪಾ? ನೀನೋರ್ವನೇ ಇಲ್ಲಿ ಏನು ಮಾಡುತ್ತೀಯ?’ ಎಂಬ ಪ್ರಶ್ನೆಗೆ ಸಿದ್ಧ ಉತ್ತರ ‘ಇಲ್ಲಿ ಬಂದವರನ್ನು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಎಂದು ಹೇಳುತ್ತೇನೆ’!?
ಸರ್ಕಾರಿ ಆಸ್ಪತ್ರೆ ಬಡಜನತೆಯ ಆಸ್ಪತ್ರೆ. ಅದೂ ಕಾನೂರು ಗ್ರಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿಯೇ ಇದೆ. ಇಲ್ಲಿನ ಆದಿವಾಸಿಗಳು ತಲ ತಲಾಂತರದಿಂದಲೂ ಆರ್ಥಿಕ ಸಂಕಷ್ಟದಲ್ಲಿಯೇ ಬದುಕು ದೂಡು ತ್ತಿದ್ದಾರೆ. ಇವರಿಗೆ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಹೋಗಲು ಕನಿಷ್ಟ ರೂ.500 ಬೇಕು. ಏಕೆಂದರೆ ಇವರಿಗೆ ಬೇಕಾಗುವ ಎಲ್ಲ ಔಷಧಿಗಳು ಸಿಗುವ ಸಾಧ್ಯತೆ ಕಡಿಮೆ. ಖಾಸಗಿ ಔಷಧಿ ಅಂಗಡಿಯಿಂದಲೇ ಖರೀದಿ ಸುವ ಅನಿವಾರ್ಯತೆ ಬರಬಹುದು. ಇದು ಕಾನೂರು ಸರ್ಕಾರಿ ಆಸ್ಪತ್ರೆಯ ಕತೆಯಲ್ಲ.
(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಇಂತಹಾ ಹಲವು ಆಸ್ಪತ್ರೆಗಳು ಸಿಗಬಹುದು. ವೀರಾಜಪೇಟೆ ತಾಲೂಕಿನಲ್ಲಿಯೇ ಬಿರುನಾಣಿ ಮತ್ತು ಚೆನ್ನಯ್ಯನಕೋಟೆಯ ಆರೋಗ್ಯ ಕೇಂದ್ರಗಳು ಈಗಾಗಲೇ ವೈದ್ಯರಿಲ್ಲದ ಸಮಸ್ಯೆ ಎದುರಿಸುತ್ತಿದೆ. ಇದೇ ಕಾನೂರು ಆಸ್ಪತ್ರೆಯನ್ನು ಸುಮಾರು 9 ಸಾವಿರಕ್ಕೂ ಅಧಿಕ ಮಂದಿ ಅವಲಂಭಿಸುತ್ತಿದ್ದರು ಎಂದರೆ ಆಶ್ಚರ್ಯವಾಗಬಹುದು. ಶನಿವಾರ, ಭಾನುವಾರ ಇತರ ರಜಾ ದಿನಗಳಲ್ಲಿ ಸುಮಾರು 200ಕ್ಕೂ ಅಧಿಕ ರೋಗಿಗಳು ಇದೇ ಆಸ್ಪತ್ರೆಯನ್ನು ಅವಲಂಭಿಸುತ್ತಿದ್ದರು ಎನ್ನಲಾಗುತ್ತಿದೆ.
ಉದ್ದೇಶಿತ ಆಸ್ಪತ್ರೆಯನ್ನು ಕಾನೂರು, ಕೋತೂರು, ಬೆಕ್ಕೆಸೊಡ್ಲೂರು, ನಾಲ್ಕೇರಿಯ ಕೆಲವು ಭಾಗದ ಜನತೆ, ನಾಗರಹೊಳೆ ಸರಹದ್ದಿನ ಬೊಮ್ಮಾಡು, ಲಕ್ಕುಂದ, ಬೆಕ್ಕೆಸೊಡ್ಲೂರು ಸಮೀಪದ ಕೃಷ್ಣ ಕಾಲೋನಿ, ಕೋತೂರು ನೀಲಮ್ಮ ಕಾಲೋನಿ, ಬಲ್ಯಮುಂಡೂರುವಿನ ಕೆಲಭಾಗದ ಜನತೆ, ಕಾನೂರುವಿನ ನಿಡುಗುಂಬ, ಒಡ್ಡರ ಮೂಲೆ, ಬೃಹ್ಮಗಿರಿ ಕಾಲೋನಿ ಜನತೆಗೆ ಕಾನೂರು ಸರ್ಕಾರಿ ಆಸ್ಪತ್ರೆಯೇ ಹಲವು ದಶಕಗಳಿಂದ ‘ಆರೋಗ್ಯ ಬಂಧು’ ಆಗಿತ್ತು. ಇದೀಗ ಇಲ್ಲಿನ ಸೇವೆ ಕನಸಿನ ಮಾತಾಗಿದೆ.
ಇದೇ ಆಸ್ಪತ್ರೆ ಕಟ್ಟಡವನ್ನು ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಿ ತಾ.25.09.2012ರಂದು ಅಂದಿನ ಸಭಾಪತಿಗಳಾಗಿದ್ದ ಕೆ.ಜಿ. ಬೋಪಯ್ಯ ಅವರು ಉದ್ಘಾಟನೆ ನೆರವೇರಿಸಿದ್ದರು. ಆಗಿನ ಮೈಸೂರು ಕೊಡಗು ಸಂಸದ ಎಚ್. ವಿಶ್ವನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ್, ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ವಿ.ಜಯಕುಮಾರ್ ಸಮ್ಮುಖದಲ್ಲಿ ಸುಸಜ್ಜಿತ ಆಸ್ಪತ್ರೆ ಅಂದು ಲೋಕಾರ್ಪಣೆಗೊಂಡಿತ್ತು. ಆದರೆ, ಸುಮಾರು 8 ವರ್ಷ ಕರ್ತವ್ಯ ನಿರ್ವಹಿಸುವ ಡಾ. ವಿ.ಜಯಕುಮಾರ್ ವರ್ಗಾವಣೆಗೊಂಡ ನಂತರ ಕಾನೂರು ಆಸ್ಪತ್ರೆ ಚಟುವಟಿಕೆ ಇದೀಗ ಮಂಕಾಗಿದೆ.
ಡಾ. ಹೆಚ್.ಆರ್. ರಾಸ್ಯ ಎಂಬ ಮಹಿಳಾ ವೈದ್ಯೆ ಬಂದು ಕರ್ತವ್ಯ ನಿರ್ವಹಿಸುತ್ತಾರಾದರೂ ಇದೀಗ ಹೆರಿಗೆ ರಜೆಯ ಮೇಲೆ ತೆರಳಿದ ನಂತರ ನಿಜಕ್ಕೂ ಆಸ್ಪತ್ರೆ ಸೇವೆ ಇಲ್ಲದೆ ಅನಾಥವಾಗಿದೆ. ಈ ಅವಧಿಯಲ್ಲಿ ನೂತನವಾಗಿ ಓರ್ವ ವೈದ್ಯರು ಇಲ್ಲಿಗೆ ಆಯ್ಕೆಯಾದರೂ ಕಾನೂರುವಿಗೆ ಕಾಲಿಡದೆ ಹಾಗೇ ನಾಪತ್ತೆಯಾಗುತ್ತಾರೆ. ಈ ಹಂತದಲ್ಲಿ ಗೋಣಿಕೊಪ್ಪಲಿನ ಆಯುಷ್ ವೈದ್ಯ ಡಾ. ಹರೀಶ್ ಅವರು ಮಂಗಳವಾರ, ಗುರುವಾರ, ಶನಿವಾರ ಕರ್ತವ್ಯಕ್ಕೆ ನಿಯೋಜಿತರಾದರೂ ವಾರದಲ್ಲಿ ಕಡ್ಡಾಯ ಮೂರುದಿನ ಸೇವೆಗೆ ಅವರೂ ಸಿಗುತ್ತಿಲ್ಲ ಎಂಬದು ಇಲ್ಲಿನ ಸಾರ್ವಜನಿಕರ ಅಳಲು. ಕುಟ್ಟದಿಂದ ‘ಫಾರ್ಮಾಸಿಸ್ಟ್’ ಬಿಂದು ಎಂಬವರು ವಾರಕ್ಕೊಮ್ಮೆ ಬಂದು ಹೋಗುತ್ತಾರೆ ಎನ್ನಲಾಗುತ್ತಿದೆ. ಇನ್ನು ಕಾನೂರುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರೂಪ್ ಡಿ ನೌಕರರಾದ ಪೆÇನ್ನಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಗ್ರಾಮ ಆರೋಗ್ಯ ಸಹಾಯಕಿ (ವಿಲೇಜ್ ನರ್ಸ್)ಯರಾಗಿ ಮುತ್ತಮ್ಮ, ಪೆÇನ್ನಮ್ಮ, ಮೀನಾಕ್ಷಿ ಕರ್ತವ್ಯದಲ್ಲಿದ್ದಾರೆ ಎಂದು ಅಂಕಿ ಅಂಶ ಹೇಳಿದರೂ, ನೀವು ಆಸ್ಪತ್ರೆಗೆ ತೆರಳಿದಾಗ ನಿಮ್ಮ ಕಣ್ಣಿಗೆ ಬೀಳುವದು ಕುಶಾಲನಗರದಿಂದ ವರ್ಗಾವಣೆಗೊಂಡು ಬಂದಿರುವ ಮಾಧವ ಎಂಬವರನ್ನು ಮಾತ್ರ. ಇವರು ಈ ಹಿಂದೆ ಪಿಡಬ್ಲ್ಯುಡಿ ‘ಗ್ಯಾಂಗ್‍ಮೆನ್’ ಆಗಿದ್ದವರು. ‘ಗ್ಯಾಂಗ್‍ಮೆನ್’ ಹುದ್ದೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದ ನಂತರ ಇವರನ್ನು ಆರೋಗ್ಯ ಇಲಾಖೆಗೆ ನಿಯೋಜಿತಗೊಳಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಕಾನೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ಕೆಲಸ ರೋಗಿಗಳನ್ನು ‘ಗೋಣಿಕೊಪ್ಪಲಿಗೆ ಹೋಗಿ’ ಎಂದು ಹೇಳುವದಷ್ಟೆ! ಇನ್ನು ಮಹಿಳೆಯರು ಹೆರಿಗೆ ನೋವೆಂದು ಬಂದರೆ ದೇವರೇ ಗತಿ. ಅಪಘಾತ ಸಂಭವಿಸಿ ಕೈ ಕಾಲು ಮುರಿದುಕೊಂಡಲ್ಲಿ ಇಲ್ಲಿ ಪ್ರಥಮ ಚಿಕಿತ್ಸೆ ಮಾಡಿ ‘ಬ್ಯಾಡೇಂಜ್’ ಹಾಕಲು ಯಾರೂ ಇಲ್ಲ. ಇನ್ನು ಹೃದಯ ಸ್ತಂಭನ ಉಂಟಾದಲ್ಲಿ ಗೋಣಿಕೊಪ್ಪಲಿಗೆ ಜೀವ ಸಮೇತ ತಲಪುವದು ಅಸಾಧ್ಯವೆ!
ಉತ್ತಮ ಆಸ್ಪತ್ರೆ ಕಟ್ಟಡ, ಉತ್ತಮ ಪ್ರಯೋಗಾಲಯ, ಉತ್ತಮ ಹೆರಿಗೆ ಕೊಠಡಿ, ಸಭಾ ಭವನ, ವೈದ್ಯರ ಕೊಠಡಿ, ವೈದ್ಯರ, ಶುಶ್ರೂಷಕಿಯರ ವಸತಿಗೃಹ... ಒಟ್ಟು 6 ಬೆಡ್‍ನ ವಾರ್ಡ್ ಇದ್ದರೂ ಇಲ್ಲಿ ಯಾರೂ ಇಲ್ಲ. ಇಲ್ಲಗಳ ನಡುವೆ ಇಲ್ಲಿ ನೀವು ಕೆಲವೊಂದು ಬೋರ್ಡ್‍ಗಳನ್ನೂ ನೋಡಿ ಆಶ್ಚರ್ಯಪಡಬಹುದು. ಇಲ್ಲಿನ ಸಭೆ ನಡೆಸುವ ಸ್ಥಳದ ಪಕ್ಕ ‘ಸ್ನೇಹ ಕ್ಲೀನಿಕ್’ ಎಂಬ ಬೋರ್ಡ್ ಕಣ್ಣಿಗೆ ಬೀಳುತ್ತದೆ. ಕರ್ನಾಟಕ ಸರ್ಕಾರ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಪ್ರತಿ ಗುರುವಾರ 10 ರಿಂದ 19 ವಯಸ್ಸಿನವರಿಗಾಗಿ ಅಪರಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಎಂಬ ಫಲಕದ ಬಗ್ಗೆ ಸಿಬ್ಬಂದಿ ಮಾಧವನಲ್ಲಿ ಕೇಳಿದಾಗ ಅದೇನೋ ನನಗೆ ಗೊತ್ತಿಲ್ಲ ಸರ್. ಯಾರೂ ಬರುತ್ತಿಲ್ಲ ಎಂದು ನಯವಾಗಿಯೇ ಹೇಳುತ್ತಾರೆ. ಇನ್ನೂ ಮುಂದೆ ನೋಡಿದಾಗ ಮತ್ತೊಂದು ಫಲಕ ಕಣ್ಣಿಗೆ ಬೀಳುತ್ತದೆ. ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಪಂಚಾಯತ್ ‘ಮನೋಚೈತನ್ಯ’ ಪ್ರತೀ ಮಂಗಳವಾರ ಈ ಕೇಂದ್ರದಲ್ಲಿ ಮನೋರೋಗಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂಬ ಫಲಕ ಬೇರೆ. ಆದರೆ, ಇಲ್ಲಿ ಆಸ್ಪತ್ರೆಯೇ ಚೈತನ್ಯವಿಲ್ಲದೆ ಮಲಗಿದೆ. ಇನ್ನೂ ಮನೋ ಚೈತನ್ಯ ಎಲ್ಲಿ ಸಾಧ್ಯ. ಇಲ್ಲಿ ಮಂಗಳವಾರ ನೀವೇನಾದರೂ ಹೋದರೆ ಅವರನ್ನೂ ಕಾಣದೇ ಮನೋಚೈತನ್ಯ ಮತ್ತಷ್ಟು ಕೆಡಿಸಿಕೊಂಡು ವಾಪಾಸ್ಸು ಬರಬೇಕಾದೀತು ಅಷ್ಟೇ. ಇಲ್ಲಿ ಸಿಬ್ಬಂದಿ ವಿವರ ಫಲಕದಲ್ಲಿ ವೈದ್ಯರಾದ ಡಾ. ರಾಸ್ಯ ಹೆಸರೂ ಒಳಗೊಂಡಂತೆ ಸುಮಾರು 8 ಹೆಸರು ಕಾಣುತ್ತದೆ. ಡಾ. ರಾಸ್ಯ ಅವರಿಗೆ ಹೆರಿಗೆ ರಜೆ ಈ ವರ್ಷದ ಏಪ್ರಿಲ್ ತಿಂಗಳಿನವರೆಗೂ ಇದೆ ಎನ್ನಲಾಗಿದ್ದರೂ, ಆ ಫಲಕದಲ್ಲಿರುವ ಇತರ ಸಿಬ್ಬಂದಿ ಅಲ್ಲಿ ಕರ್ತವ್ಯದಲ್ಲಿರುವದು ಕಾಣುವದೇ ಇಲ್ಲ. ಇನ್ನು ರಕ್ಷಾ ಸಮಿತಿ ಫಲಕದಲ್ಲಿ ಸದಸ್ಯರಾಗಿ ಕಾನೂರು ಗ್ರಾ.ಪಂ. ಅಧ್ಯಕ್ಷೆ ಬಿ.ಸಿ. ಲತಾಕುಮಾರಿ, ಜೆ.ಎಲ್. ಗೌರಮ್ಮ, ವಿವೇಕ್, ಶಿಲ್ಪ ಅಪ್ಪಣ್ಣ, ಶಾಲಾ ಮುಖ್ಯಶಿಕ್ಷಕಿ ಭಾಗ್ಯವತಿ, ಅಕ್ಕಮ್ಮ ಎಸ್.ಎಂ., ಆರೋಗ್ಯಾಧಿಕಾರಿ ಡಾ. ರಾಸ್ಯ ಹೆಸರು ಇದ್ದು, ಓರ್ವರು ವೈದ್ಯರಷ್ಟೇ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಶುಶ್ರೂಷಕಿಯನ್ನಾದರೂ ಇಲ್ಲಿ ತಾತ್ಕಾಲಿಕವಾಗಿ ನೇಮಿಸಲು ಸಾಧ್ಯವಾಗಿಲ್ಲವೇ ಎಂಬ ಅನುಮಾನ ಬರುತ್ತದೆ.
ತಿತಿಮತಿಯಲ್ಲಿ ವಿವೇಕಾನಂದ ಟ್ರಸ್ಟ್ ಹಾಗೂ ಶ್ರೀಮಂಗಲದಲ್ಲಿ ಕರುಣಾ ಟ್ರಸ್ಟ್ ಮೂಲಕ ಸರ್ಕಾರಿ ಆಸ್ಪತ್ರೆಯನ್ನು ಆರೋಗ್ಯಬಂಧು ಯೋಜನೆಯಲ್ಲಿ ಮುನ್ನಡೆಸಲಾಗುತ್ತಿದೆ. ಇಲ್ಲ ಇಲ್ಲಗಳ ನಡುವೆ ಇಂತಹ ಟ್ರಸ್ಟ್ ಎಷ್ಟೋ ಪರವಾಗಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಒಟ್ಟು ಹುದ್ದೆ 21. ಆದರೆ, ಕೇವಲ 6 ಮಂದಿ ಮಾತ್ರ ಕರ್ತವ್ಯದಲ್ಲಿದ್ದು ಒಟ್ಟು 15 ಹುದ್ದೆ ಖಾಲಿ ಇದೆ ಎಂದು ಅಂಕಿ ಅಂಶ ಹೇಳುತ್ತದೆ.
ಇದೀಗ ರಾಜ್ಯದ ಬೆಂಗಳೂರಿನ ರಾಷ್ಟ್ರೀಯ ಆರೋಗ್ಯ ಮಿಷನ್‍ಗೆ ನೂತನವಾಗಿ ಎಂ.ಡಿ.ಯಾಗಿ ದಾವಣಗೆರೆಯ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇನ್ನು ಎಲ್ಲ ವ್ಯವಸ್ಥೆಯೂ ಸರಿಹೋಗಬಹುದು ಎಂದು ಹೇಳಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಪುರುಷರು, ಮಹಿಳೆಯರು ಮೈಸೂರು, ಬೆಂಗಳೂರು ಇತ್ಯಾದಿಕಡೆಗಳಲ್ಲಿ ‘ನರ್ಸ್ ಟ್ರೈನಿಂಗ್’ ಪೂರ್ಣಗೊಳಿಸಿ ಸರ್ಕಾರಿ ಕೆಲಸ ದೊರೆಯದೆ ಅಲ್ಲಿ ಇಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯದಲ್ಲಿದ್ದಾರೆ. ಇಂತಹವರನ್ನು ಕೊಡಗು ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಕೇಂದ್ರಗಳಿಗೆ ಆಯ್ಕೆ ಮಾಡಿದ್ದಲ್ಲಿ ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಇವರು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ ಎಂಬ ಅಭಿಪ್ರಾಯವೂ ಇದೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಂಡಲ್ಲಿ ವೈದ್ಯರ ಬದಲಿಗೆ ಇಂತಹ ಆಸ್ಪತ್ರೆಗಳಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಕಿರಿಯ ಪುರುಷ ಆರೋಗ್ಯ ಸಹಾಯಕರ ಸೇವೆಯನ್ನಾದರೂ ಕಾಣಬಹುದಾಗಿದೆ. ಕಾನೂರುವಿಗೆ ಶಾಶ್ವತ ವೈದ್ಯರ ಅಗತ್ಯವಿದೆ. ಎಲ್ಲೆಡೆ ಆಯುಷ್ ವೈದ್ಯರೇ ಕಾರ್ಯನಿರ್ವಹಿಸುವಂತಾಗಿದೆ. ಇದೀಗ ಕೊಡಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳ ವರ್ಗಾವಣೆಯಾಗಿದ್ದು ಅದೂ ಖಾಲಿ ಬಿದ್ದಿದೆ. ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ಯು ಅವರ ಪ್ರಕಾರ ಹಲವು ಬಾರಿ ಜಿ.ಪಂ. ಸಭೆಯಲ್ಲಿ ಹಾಗೂ ಖುದ್ದು ಇಲಾಖಾಧಿಕಾರಿಗಳಲ್ಲಿ ಡಾ. ರಾಸ್ಯಗೆ ಬದಲಿ ಶಾಶ್ವತ ವೈದ್ಯರ ನೇಮಕಕ್ಕೆ ಒತ್ತಾಯಿಸಿದ್ದಾರೆ. ಆದರೆ, ಅವರ ಮಾತಿಗೆ ಕವಡೆ ಕಿಮ್ಮತ್ತೂ ಬೆಲೆ ದೊರೆತಿಲ್ಲ. ಆರೋಗ್ಯ ಸೇವೆಯಿಲ್ಲದ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಇಲ್ಲಿನ ಗ್ರಾಮಸ್ಥರ ಹೋರಾಟ ಇದೀಗ ಅನಿವಾರ್ಯವಾಗಿದೆ ಎಂದು ಹೇಳುತ್ತಾರೆ ಇಲ್ಲಿನ ಸಮಾಜ ಸೇವಕರಾದ ಅಳಮೇಂಗಡ ವಿವೇಕ್, ಕಾಡ್ಯಮಾಡ ಭರತ್ ಮತ್ತು ಕಾಡ್ಯಮಾಡ ಬೋಪಣ್ಣ ಹಾಗೂ ಇತರರು.
ವಿಶೇಷ ವರದಿ: ಟಿ.ಎಲ್. ಶ್ರೀನಿವಾಸ್