ಮಡಿಕೇರಿ, ಫೆ. 5: ತೆಲಂಗಾಣ ರಾಜ್ಯದ ಸರೂರ್‍ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಣಿ ಉದ್ಯಮಿ ಮಾರುತಿ ಪ್ರಸಾದ್ ಎಂಬವರ ಪುತ್ರ ವಿನಯ್ (28) ಎಂಬಾತನು ಕಾಣೆಯಾಗಿ 20 ದಿನಗಳಾದರೂ, ಇನ್ನೂ ಯಾವದೇ ಸುಳಿವಿಲ್ಲವೆಂದು ಪೊಲೀಸರು ಖಚಿತಪಡಿಸಿದ್ದಾರೆ. ಕಳೆದ ಜ. 17 ರಂದು ತನ್ನ ಕಾರು ಸಹಿತ ಈ ಯುವಕ ನಾಪತ್ತೆಯಾಗಿದ್ದು, ತಾ. 18ರ ಬೆಳಗಿನ ಜಾವ ನಗರದ ಹಳೆ ಸಿದ್ದಾಪುರ ರಸ್ತೆ ಬದಿ ಈತನ ಕಾರು (ಟಿ.ಎಸ್. 07 - ಎಫ್‍ಕ್ಯೂ 3377) ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಈ ಬಗ್ಗೆ ಸ್ಥಳೀಯ ನಿವಾಸಿ ಬಬ್ಬು ಗಣಪತಿ ಅವರು ಪೊಲೀಸರಿಗೆ ನೀಡಿದ ಸುಳಿವಿನ ಮೇರೆಗೆ, ಜ. 23 ರಂದು ತೆಲಂಗಾಣ ಪೊಲೀಸರು ಆಗಮಿಸಿ ತನಿಖೆ ಕೈಗೊಳ್ಳುವದ ರೊಂದಿಗೆ, ಸಂಬಂಧಿಸಿದ ಕಾರನ್ನು ಯುವಕನ ತಂದೆ ಮಾರುತಿ ಪ್ರಸಾದ್ ವಶಕ್ಕೆ ಒಪ್ಪಿಸಿದ್ದರು. ಅಲ್ಲದೆ ನಗರದಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ವೇಳೆ, ವಿನಯ್ ತನ್ನ ಕಾರು ನಿಲ್ಲಿಸಿ ಸುದರ್ಶನ ವೃತ್ತದ ಹೆದ್ದಾರಿಯಲ್ಲಿ ತೆರಳಿರುವ ಸುಳಿವು ಲಭಿಸಿತ್ತು.ಆ ಹೊರತಾಗಿ ಇದುವರೆಗೆ ಯುವಕನ ಬಗ್ಗೆ ಯಾವದೇ ಸುಳಿವಿಲ್ಲವೆಂದು ಸರೂರ್ ನಗರ ಠಾಣೆಯ ತನಿಖಾಧಿಕಾರಿ ಯಾದಯ್ಯ ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ. ಈಗಾಗಲೇ ವಿನಯ್ ಪೋಷಕರು ಮತ್ತು ಆತನ ಸ್ನೇಹಿತರ ಸಹಿತ ಎಲ್ಲಾ ಮೂಲಗಳಿಂದ (ಮೊದಲ ಪುಟದಿಂದ) ಮಾಹಿತಿ ಕಲೆ ಹಾಕಿದರೂ ಯಾವದೇ ಪ್ರಯೋಜನ ವಾಗಿಲ್ಲವೆಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ ನಾಪತ್ತೆ ಯಾಗಿರುವ ವಿನಯ್ ತನ್ನ ಕಾರಿನಲ್ಲೇ ಮೊಬೈಲ್ ಕೂಡ ಬಿಟ್ಟು ತೆರಳಿರುವ ಕಾರಣ, ತನಿಖೆಗೆ ಸಮಸ್ಯೆಯಾಗಿದ್ದು, ಇದುವರೆಗೆ ಆತ ತನ್ನ ಪೋಷಕರ ಸಹಿತ ಯಾರಿಗೂ ಬೇರೆಡೆಯಿಂದ ಕರೆಯನ್ನು ಮಾಡಿಲ್ಲವೆಂದು ವಿವರಿಸಿದ್ದಾರೆ. ಹೀಗಾಗಿ ವಿನಯ್ ಪೋಷಕರು ಕಂಗಾಲಾಗಿದ್ದು, ಮಗನಿಗಾಗಿ ಪರಿತಪಿಸುವಂತಾಗಿದೆ.

ಇತ್ತ ಪ್ರಕರಣ ಸರೂರ್‍ನಗರ ಠಾಣೆಯಲ್ಲಿ ದಾಖಲಾಗಿರುವ ಕಾರಣ; ಕೊಡಗು ಪೊಲೀಸರು ಏನೂ ಮಾಡುವಂತಿಲ್ಲವೆಂದು ಇಲ್ಲಿನ ಪೊಲೀಸ್ ಮೂಲಗಳು ಅಭಿಪ್ರಾಯಪಟ್ಟಿವೆ. ಬದಲಾಗಿ ಆತನ ಸುಳಿವು ಲಭಿಸಿದರೆ, ಕ್ರಮ ವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಗಣಿ ಉದ್ಯಮಿ ಪುತ್ರನ ನಾಪತ್ತೆ ಪ್ರಕರಣ ತೆಲಂಗಾಣ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.