ಕೂಡಿಗೆ, ಫೆ. 5: ಹೆಬ್ಬಾಲೆ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ, ಅರಶಿನಗುಪ್ಪೆಯ ಶ್ರೀ ಸುಬ್ರಹ್ಮಣ್ಯ ಯುವ ಮಂಡಳಿ, ಮಡಿಕೇರಿಯ ನೆಹರು ಯುವ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ ಕಾರ್ಯಕ್ರಮ ಅರಶಿನಗುಪ್ಪೆಯಲ್ಲಿ ನಡೆಸಲಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿವಿಧ ಸ್ಪರ್ಧೆ ನಡೆಸಲಾಯಿತು. ಮಧ್ಯಾಹ್ನದ ನಂತರ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ ಮಾತನಾಡಿ, ಇಂತಹ ಕ್ರೀಡಾಕೂಟ ಕಾರ್ಯಕ್ರಮ ಆಯೋಜನೆ ಮಾಡಿರುವದು ಸಂತಸದ ವಿಷಯ. ಎಲ್ಲರೂ ಪ್ರತಿದಿನ ಮನೆ ಕೆಲಸ, ಜಮೀನು ಕೆಲಸ ಮಾಡುತಿದ್ದು, ವರ್ಷಕ್ಕೆ ಒಂದು ಬಾರಿ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುವದರಿಂದ ಎಲ್ಲರ ಮನಸ್ಸಿಗೆ ಸಂತೋಷವಾಗುತ್ತದೆ.
ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಇಂತಹ ಕಾರ್ಯಕ್ರಮ ಮಾಡುವದರಿಂದ ನಮ್ಮ ಗ್ರಾಮಕ್ಕೆ ಒಂದು ಒಳ್ಳೆಯ ಹೆಸರು ಬಂದಿದೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ರವಿಕುಮಾರ್, ಊರಿನ ಗಣ್ಯರಾದ ಉದಯ, ಕುಮಾರ್, ಶುಂಠಿ ರಾಮಣ್ಣ, ಒಕ್ಕೂಟದ ಉಪಾಧ್ಯಕ್ಷೆ ಪಾರ್ವತಿ ಸುಬ್ರಮಣ್ಯ, ಯುವ ಮಂಡಳಿ ಅಧ್ಯಕ್ಷರಾದ ಜಶ್ಮಿ, ವಲಯದ ಮೇಲ್ವಿಚಾರಕ ವಿನೋದ್ ಕುಮಾರ್, ಸೇವಾ ಪ್ರತಿನಿಧಿ ಮಂಜುಳಾ, ಒಕ್ಕೂಟದ ಕಾರ್ಯದರ್ಶಿ ಲಿಂಗರಾಜ್, ಜ್ಞಾನ ವಿಕಾಸ, ಸಂಯೋಜಕಿ ವಿಮಲಾ, ಒಕ್ಕೂಟದ ಪದಾಧಿಕಾರಿಗಳು ಹಾಗೂ ವಲಯದ ಸೇವಾಪ್ರತಿನಿಧಿ ಹಾಜರಿದ್ದರು.