*ಗೋಣಿಕೊಪ್ಪಲು, ಫೆ. 5: ಕಾನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. 68 ಲಕ್ಷ ಅನುದಾನದಲ್ಲಿ ನಿರ್ಮಾಣ ವಾಗುವ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ಶಾಸಕರ ಅನುದಾನ, ಲೋಕೊಪಯೋಗಿ ಇಲಾಖೆ ವಿಭಾಗದ ಕಾಮಗಾರಿ, ಮಳೆಹಾನಿ ಪರಿಹಾರ ಅನುದಾನ ಟಾಸ್ಕ್‍ಫೋರ್ಸ್ ಅನುದಾನದ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು. ಮಳೆಹಾನಿ ವಿಶೇಷ ಅನುದಾನದ ರೂ. 20 ಲಕ್ಷ ವೆಚ್ಚದಲ್ಲಿ ರೂ. 10 ಲಕ್ಷ ಮಂದತವ್ವ ಕಾವೇರಿ ಕಾಲೋನಿ ಸಂಪರ್ಕ ರಸ್ತೆ ಮತ್ತು ಉಳಿದ ರೂ. 10 ಲಕ್ಷ ವೆಚ್ಚದಲ್ಲಿ ಕೋತ್ತೂರು ಬಿಟ್ಟಂಬಾರೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಬಳಸಲಾಗುತ್ತಿದೆ.
ಶಾಸಕರ ರೂ. 3 ಲಕ್ಷ ಅನುದಾನದಲ್ಲಿ ಬೆಕ್ಕೆಸೊಡ್ಲೂರು ಕಾವೇರಿ ಕಾಲೋನಿ ಸಂಪರ್ಕ ರಸ್ತೆ ಮತ್ತು ಮಲ್ಲೇಂಗೇರಿ ಸುಳ್ಳಿಮಾಡ ಸಂಪರ್ಕ ರಸ್ತೆಗೆ ತಲಾ ರೂ. 1.50 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಟಾಸ್ಕ್‍ಫೋರ್ಸ್ ಅನುದಾನದ ಕಾಮಗಾರಿಯಲ್ಲಿ ರೂ. 3 ಲಕ್ಷ ವೆಚ್ಚದಲ್ಲಿ ಲಕುಂದ ಕಾಲೋನಿ ರಸ್ತೆ ಅಭಿವೃದ್ಧಿ ನಡೆಯಲಿದೆ.
ಲೋಕೊಪಯೋಗಿ ಇಲಾಖೆ ವಿಭಾಗದ ಕಾಮಗಾರಿಗಳಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ ಬೆಕ್ಕೆಸೊಡ್ಲೂರು, ಕುಂಬತ್ ಮಾನಿ, ಈಶ್ವರ ದೇವಸ್ಥಾನ ರಸ್ತೆ, ರೂ. 5 ಲಕ್ಷ ವೆಚ್ಚದಲ್ಲಿ ಕೋತ್ತೂರು, ಬಿಟ್ಟಂಬರೆ ನಿಂಗಯ್ಯ ಕಾಲೋನಿ ಸಂಪರ್ಕ ರಸ್ತೆ, ರೂ. 5 ಲಕ್ಷ ವೆಚ್ಚದಲ್ಲಿ ಮಲ್ಲೇಂಗೇರಿ ಸಂಪರ್ಕ ರಸ್ತೆ ಅಭಿವೃದ್ಧಿ ಬೊಮ್ಮಾಡು, ಅಣ್ಣಳಮಾಡ ಸಂಪರ್ಕ ರಸ್ತೆ, ರೂ. 5 ಲಕ್ಷದಲ್ಲಿ ಬೆಕ್ಕೆಸೊಡ್ಲೂರು, ಮೇಗಲಗೇರಿ ಅರಳಿಮರ ರಸ್ತೆ, ರೂ. 10ಲಕ್ಷ ವೆಚ್ಚದಲ್ಲಿ ನಿಡುಗುಂಬ ಹಾವುಕಲ್ಲು ರಸ್ತೆ ಸೇರಿದಂತೆ ಒಟ್ಟು ರೂ. 68 ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಹಾಗೂ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ಮೂಲಕ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗ ರಸ್ತೆಗಳು ಈ ಬಾರಿಯ ಮಳೆಗೆ ಡಾಂಬರೀಕರಣ ಕಿತ್ತುಹೋಗಿದೆ. ಮಳೆಹಾನಿ ವಿಶೇಷ ಅನುಧಾನ ಮತ್ತು ಶಾಸಕರ ಅನುದಾನದಲ್ಲಿ ಹಂತಹಂತವಾಗಿ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಗ್ರಾಮೀಣ ಪ್ರದೇಶಗಳಾದ ಕಾಲೋನಿ, ಹಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವದು. ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಜನ ಬಳಸಿ ಕೊಳ್ಳಬೇಕು. ಉಜ್ವಲ್ ಯೋಜನೆಯಡಿ ಕೇಂದ್ರ ಸರ್ಕಾರ ಬಿಪಿಎಲ್ ಪಡಿತ ಫಲಾನುಭವಿಗಳಿಗೆ ನೀಡುವ ಉಚಿತ ಅನಿಲ ಸಂಪರ್ಕಗಳನ್ನು ಪಡೆದುಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಫಲಾನುಭವಿಗಳಾಗಬೇಕು ಎಂದು ಸಲಹೆ ನೀಡಿದರು.
ಕಾನೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಡ್ಯಮಾಡ ಭರತ್ ಮಾಚಯ್ಯ, ಗ್ರಾ.ಪಂ. ಅಧ್ಯಕ್ಷೆ ಲತಾಕುಮಾರಿ, ಸದಸ್ಯ ಸುಳ್ಳಿಮಾಡ ದೀಪಕ್, ಶಿಲ್ಪಜಯ, ಆರ್.ಎಂ.ಸಿ. ಸದಸ್ಯ ಸುಜಾ ಬೋಪಯ್ಯ, ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಅರುಣ್ ಭೀಮಯ್ಯ, ಕಾರ್ಯದರ್ಶಿ ಲಾಲ ಭೀಮಯ್ಯ, ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಫೆಡರೇಷನ್ ನಿರ್ದೇಶಕ ಮಚ್ಚಮಾಡ ಕಂದ ಭೀಮಯ್ಯ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನ ಚಂಗಪ್ಪ, ಟೌನ್ ಬ್ಯಾಂಕ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಪ್ರಮುಖರಾದ ಎಂ.ಎಂ. ನಂಜಪ್ಪ, ಜಿ.ಎ. ಗಿರೀಶ್ ಗಣಪತಿ, ರಮೇಶ್, ನಾಣಿ, ಕೊಟ್ಟಂಗಡ ಡಾಲಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.