ಮಡಿಕೇರಿ, ಫೆ. 5: ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಉದರ ವಿಭಾಗದ ಸ್ಕ್ಯಾನಿಂಗ್ ಲಭ್ಯವಿಲ್ಲದೆ ರೋಗಿಗಳು ಬವಣೆÉ ಪಡುತ್ತಿದ್ದಾರೆ. ನಿನ್ನೆ ದಿನ ನೆಲಜಿ, ನಾಪೋಕ್ಲು ಮತ್ತಿತರ ಗ್ರಾಮಗಳಿಂದ ಬಂದಿದ್ದ ಮಂದಿ ಈ ಕುರಿತು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡರು. ಅನೇಕ ಪ್ರಮುಖ ರೋಗಗಳು ಪತ್ತೆಯಾಗಬೇಕಾದರೆ, ಉದರ ಭಾಗದಲ್ಲಿ ಸ್ಕ್ಯಾನಿಂಗ್ ನಡೆಸುವದು ಅತ್ಯಗÀತ್ಯವಾಗುತ್ತದೆ. ಆದರೆ, ಮಡಿಕೇರಿಯ ಜಿಲ್ಲಾಸ್ಪತ್ರೆÉಯಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ ನಿಷ್ಪ್ರಯೋಜಕವಾಗಿದೆ. ನಮಗೆ ಹೊರಗೆ ಖಾಸಗಿ ಸ್ಕ್ಯಾನಿಂಗ್ ನಡೆಸುವ ತಜ್ಞರಿಂದ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರಲು ವೈದ್ಯರು ಚೀಟಿ ನೀಡುತ್ತಾರೆ. ಅಲ್ಲಿ ಕನಿಷ್ಟ ಪ್ರತಿ ಸ್ಕ್ಯಾನಿಂಗ್‍ಗೆ ರೂ. 600 ನೀಡಬೇಕಾಗುತ್ತದೆ. ಅಲ್ಲದೆ, ಕೆಲವೊಮ್ಮೆ ಜನರ ಒತ್ತಡ ಹೆಚ್ಚಾಗಿ ಸಂಜೆವರೆಗೂ ಕಾಯಬೇಕಾಗುತ್ತದೆ ಎಂದು ಅನೇಕ ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡರು. ಸರಕಾರಿ ಆಸ್ಪತ್ರೆ ಎಂದು ಉಚಿತ ಚಿಕಿತ್ಸೆಗಾಗಿ ಬರುವ ನಮಗೆ ಒಂದೆಡೆ ಹಣ ವ್ಯಯವಾಗುವದರೊಂದಿಗೆ ಸಮಯವೂ ವ್ಯರ್ಥವಾಗುತ್ತಿದೆ ಎಂದು ಈ ಮಂದಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಮಸ್ಯೆ ಕುರಿತು ಜಿಲ್ಲಾಸ್ಪತ್ರೆಯ ಸರ್ಜನ್ ಜಗದೀಶ್ ಕಾರಿಯಪ್ಪ ಅವರನ್ನು ‘ಶಕ್ತಿ’ ಪ್ರಶ್ನಿಸಿದಾಗ ಮುಖ್ಯವಾಗಿ ರೇಡಿಯಾಲಜಿಸ್ಟ್ ದೊರಕದೆ ಈ ಸಮಸ್ಯೆ ಉದ್ಭವಿಸಿದೆ ಎಂದು ವಿವರಿಸಿದರು. ರೇಡಿಯಾಲಜಿಸ್ಟ್‍ಗಳಿಗೆ ರಾಜ್ಯದಲ್ಲಿಯೇ ಭಾರೀ ಬೇಡಿಕೆಯಿದೆ. ಅನೇಕ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್‍ಗಳಿಲ್ಲದೆ ತೀವ್ರ ಸಮಸ್ಯೆಯಿದೆ. ನಮ್ಮ ಆಸ್ಪತ್ರೆಯಲ್ಲಿ ಗರಿಷ್ಠ ಪ್ರಮಾಣದ ವೇತನ ನೀಡಿದರೂ ಈ ಹುದ್ದೆಗೆ ಯಾರೂ ಬರುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ರೋಗಿಗಳಿಗೆ

(ಮೊದಲ ಪುಟದಿಂದ) ಹೊರಗಡೆಯ ಖಾಸಗಿ ಕೇಂದ್ರದಿಂದ ಸ್ಕ್ಯಾನಿಂಗ್‍ಗೆ ಕಳುಹಿಸಲಾಗುತ್ತಿದೆ ಎಂದು ಅವರು ಮಾಹಿತಿಯಿತ್ತರು. ಆದರೆ, ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಕಂಪ್ಯೂಟರೀಕೃತ ವ್ಯವಸ್ಥೆಯೊಂದಿಗೆÉ ಈ ಸ್ಕ್ಯಾನಿಂಗ್ ನಡೆಸಲಾಗುತ್ತಿದ್ದು, ‘ಆನ್‍ಲೈನ್’ನಲ್ಲಿ ತಕ್ಷಣ ವರದಿ ಬರುತ್ತಿದೆ. ಅತ್ಯಂತ ದುಬಾರಿಯಾದ ಈ ಸ್ಕ್ಯಾನಿಂಗ್ ಸೌಲಭ್ಯವನ್ನು ಉಚಿತವಾಗಿ ದಿನಕ್ಕೆ ಕನಿಷ್ಟ 25-30 ಮಂದಿ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಡಯಾಲಿಸಿಸ್ ಕೆಂದ್ರದಲ್ಲಿಯೂ 8 ಆಪರೇಟರ್‍ಗಳಿದ್ದು ತಿಂಗಳಿಗೆ ಸುಮಾರು 250 ಮಂದಿಗೆ ಡಯಾಲಿಸಿಸ್ ನಡೆಸಲಾಗುತ್ತಿದೆ ಎಂದರು.