ಮಡಿಕೇರಿ, ಫೆ. 5: ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೆÉಮಾಡು ಸೇರಿದಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಜಾಗ ಮಂಜೂರಾತಿ ಕೋರಿ ಸಲ್ಲಿಕೆಯಾಗಿರುವ ಸಾವಿರಾರು 94ಸಿ ಮತ್ತು 94ಸಿಸಿ ಅರ್ಜಿಗಳು ತಾಲೂಕು ಕಚೇರಿಗಳಲ್ಲಿ ಧೂಳು ಹಿಡಿಯುತ್ತಾ ಬಿದ್ದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬಹುಜನ ಕಾರ್ಮಿಕರ ಸಂಘ ಅರ್ಜಿಗಳÀ ಶೀಘ್ರ ವಿಲೇವಾರಿಗೆ ಆಗ್ರಹಿಸಿ ತಾ. 8 ರಂದು ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಕೆ. ಮೊಣ್ಣಪ್ಪ, ರಾಜ್ಯದ ಕಂದಾಯ ಇಲಾಖೆಯು 2014ರಲ್ಲಿ ಗ್ರಾಮೀಣ ನಿವಾಸಿಗಳಿಗೆ 94ಸಿಸಿ ಆದೇಶ ಜಾರಿಗೆ ತಂದು 5 ವರ್ಷ ಪೂರ್ಣ ಗೊಂಡಿದ್ದರೂ, 94ಸಿ ಮತ್ತು 94ಸಿಸಿ ಯಡಿ 2014ರಲ್ಲಿ ಸಲ್ಲಿಕೆಯಾಗಿರುವ ಅದೆಷ್ಟೋ ಅರ್ಜಿಗಳು ಇನ್ನೂ ಕೂಡ ಇತ್ಯರ್ಥ ವಾಗದೆ ಹಾಗೆಯೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಅಧಿಕಾರಿ ಗಳೊಂದಿಗೆ ಈ ಬಗ್ಗೆ ವಿಚಾರಿಸಿದಾಗ, ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಮನೆ ನಿರ್ಮಾಣದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಹಕ್ಕುಪತ್ರಗಳಿಗೆ ಸಂಬಂಧಿಸಿದ ಕೆಲಸ ನಡೆಯುತ್ತಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಡವರ ಪರ ಯಾವದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ ಅವರು, ಕೊಡಗಿನ ಜನ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಐದು ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ತಾ. 8 ರಂದು ಪ್ರತಿಭಟನೆ ನಡೆಸುವದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಹೊದ್ದೂರು ಗ್ರಾ.ಪಂ. ಉಪಾಧ್ಯಕ್ಷೆ ಪಿ.ಎ. ಕುಸುಮಾವತಿ, ಪಾಲೆಮಾಡು ಮಾಯಾದೇವಿ ಮಹಿಳಾ ಸಂಘದ ಸದಸ್ಯರಾದ ಬೋಜಮ್ಮ, ಯಶೋಧ, ಮಾಯದೇವಿ ಮಹಿಳಾ ಸಂಘದ ಸಲಹೆಗಾರರಾದ ಲಕ್ಷ್ಮಿ ಹಾಗೂ ಕಾರ್ಯದರ್ಶಿ ವೀಣಾ ಉಪಸ್ಥಿತರಿದ್ದರು.