ಮಡಿಕೇರಿ, ಫೆ. 6: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಲ್ಲಿ ಜಾಗೃತಿಯೊಂದಿಗೆ ಸಾಕ್ಷರತೆ ಹಾಗೂ ಸಹಿಷ್ಣುತೆಯ ಸಂದೇಶ ಸಾರುತ್ತಾ, ಕಳೆದ ಜನವರಿ 10 ರಂದು ಕಾಶ್ಮೀರದಿಂದ ಆರಂಭಗೊಂಡಿರುವ ಭಾರತಯಾತ್ರೆಯ (ಹಿಂದ್ ಸಫರ್) ತಾ. 7 ರಂದು (ಇಂದು) ಕೇರಳದ ಕಲ್ಲಿಕೋಟೆಯಲ್ಲಿ ಸಮಾರೋಪ ಗೊಳ್ಳಲಿದೆ. ಈ ಯಾತ್ರೆ ಇಂದು ಜಿಲ್ಲೆಗೆ ಆಗಮಿಸುವದರೊಂದಿಗೆ, ಇಲ್ಲಿನ ಎಸ್‍ಎಸ್‍ಎಫ್ ಬಳಗದಿಂದ ಆತ್ಮೀಯವಾಗಿ ಬರಮಾಡಿ ಕೊಳ್ಳಲಾಯಿತು.ಆ ಬಳಿಕ ನಗರದ ಬಾಲಭವನದಲ್ಲಿ ಜರುಗಿದ ಸಮಾರಂಭದಲ್ಲಿ ಎಸ್‍ಎಸ್‍ಎಫ್ ರಾಷ್ಟ್ರ ಹಾಗೂ ರಾಜ್ಯಮಟ್ಟದ ನಾಯಕರು ಮಾತನಾಡುತ್ತಾ, ಯಾತ್ರೆಯ ಉದ್ದೇಶ ಮತ್ತು ಸಮಾಜದಲ್ಲಿ ಸಹಿಷ್ಣುತೆ ಯೊಂದಿಗೆ ಪ್ರತಿಯೊಬ್ಬರು ವಿದ್ಯಾಭ್ಯಾಸದ ಮೂಲಕ ಸಾಕ್ಷರರಾಗುವಂತೆ ಕರೆ ನೀಡಿದರು. ಆ ಮೂಲಕ ಸರ್ವರಲ್ಲಿ ಶಾಂತಿ - ಸಹಬಾಳ್ವೆ ಕಂಡುಕೊಳ್ಳುವಂತೆಯೂ ತಿಳಿ ಹೇಳಿದರು. ಈ ಒಂದು ಮಾಸದ ಯಾತ್ರೆ ಕಲ್ಲಿಕೋಟೆಯ ಕಡಲ ತಡಿಯಲ್ಲಿ ಸಮಾರೋಪಗೊಳ್ಳಲಿದೆ ಎಂದು ವಿವರಿಸಿದರು. ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಏರ್ಪಡಿಸಿರುವ ಈ ಯಾತ್ರೆಯಲ್ಲಿ ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತಕ್ಕಾಗಿ ಹಿಂದ್ ಸಫರ್, (ಭಾರತ ಯಾತ್ರೆ) ಕಾರ್ಯಕ್ರಮವು ಬಾಲ ಭವನದಲ್ಲಿ ಸಂಗಮಗೊಂಡಿತು.ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಎಸ್.ಎಸ್.ಎಫ್ ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತಕ್ಕಾಗಿ, ದೇಶದ 22 ರಾಜ್ಯಗಳಲ್ಲಿ 14 ಸಾವಿರ ಕಿ.ಮೀ. ಸಂಚರಿಸಿ ಹೊಸ ಇತಿಹಾಸವನ್ನು ಸೃಷ್ಟಿಮಾಡುವದರ ಮೂಲಕ ಸಹಿಷ್ಣುತೆಯ ಭಾರತ ನಿರ್ಮಾಣ ಮಾಡಲು ಪಣತೊಟ್ಟಿದೆ ಎಂದು ಯಾತ್ರೆಯ ನಾಯಕತ್ವವನ್ನು ವಹಿಸಿರುವ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಸಿದ್ದೀಕ್ ಮೋಂಟುಗೋಳಿ ಅಭಿಪ್ರಾಯಪಟ್ಟರು.

ಕಾಶ್ಮೀರದಿಂದ ಪ್ರಾರಂಭಗೊಂಡ ಯಾತ್ರೆ ದೇಶದ 22 ರಾಜ್ಯಗಳಲ್ಲಿ ಸಂಚರಿಸಿ, (ಮೊದಲ ಪುಟದಿಂದ) ಶಿಕ್ಷಣದ ಹಾಗೂ ಸಹಿಷ್ಣುತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದ ಅವರು, ಭಾರತ ಸುಂದರವಾದ ಪರಂಪರೆ ಯನ್ನು ಹೊಂದಿರುವ ದೇಶವಾಗಿದೆ. ಆದರೆ ಇಂದಿಗೂ , ಗುಡಿಸಲು ಮನೆಗಳಲ್ಲಿ ಜನರು ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವದು ನೋಡಿದರೆ ನಿಜಕ್ಕೂ ಖೇಧವಾಗುತ್ತದೆ ಎಂದರು.

ಭಾರತ ಯಾತ್ರೆಯಲ್ಲಿ ಎಲ್ಲಾ ಜಾತಿ ಧರ್ಮಗಳ ಗುರುಗಳು ಬಹಳ ಸಂತೋಷದಿಂದ ಸ್ವಾಗತ ಮಾಡಿಕೊಂಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿ, ಅವರು ಸಮಾಜದಲ್ಲಿ ಸಹಿಷ್ಣುತೆಗೆ ಕರೆ ನೀಡಿದರು. ಕರ್ನಾಟಕ ರಾಜ್ಯ ಎಸ್.ಎಸ್.ಎಫ್.ಅಧ್ಯಕ್ಷ ಸಿ.ಟಿ.ಎಂ ತಂಙಳ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಹಿಷ್ಣುತೆಯು ದೂರವಾಗುತ್ತಿದೆ.

ಭಾರತ ವಿವಿಧತೆಯಲ್ಲಿ ಏಕತೆ ಇರುವ ಒಂದು ದೇಶ. ಹಿಂದೂ, ಮುಸ್ಲಿಂ ,ಕ್ರೈಸ್ತ ಎಲ್ಲಾ ಜನಾಂಗದವರು ಜೀವನ ನಡೆಸುತ್ತಿರುವ ಸುಂದರವಾದ ಈ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಹಿಷ್ಣುತೆ ದೂರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಸ್.ಎಸ್.ಎಫ್ ಭಾರತ ಯಾತ್ರೆಯು ತಾ. 7 ರಂದು ಕೇರಳ ಕಲ್ಲಿಕೋಟೆಯಲ್ಲಿ ಸಮಾರೋಪ ಸಮಾರಂಭಗೊಳ್ಳಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ನೂತನ ಎಸ್.ಎಸ್.ಎಫ್.ಅಧ್ಯಕ್ಷರಾದ ಸಿ.ಟಿ.ಎಂ ತಂಙಲ್ ಹಾಗೂ ಸದಸ್ಯರನ್ನು , ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಜಮಾಹತ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಹ್ಮೂದ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ರಾಷ್ಟ್ರೀಯ ಎಸ್.ಎಸ್.ಎಫ್. ಅಧ್ಯಕ್ಷ ಶೌಕತ್ ನಹೀಮಿ, ನೂರಾನಿ ಪಶ್ಚಿಮ ಬಂಗಾಳ, ಸಲ್ಮಾನ್ ಖುರ್ಷಿದ್, ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್, ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಹಫೀಲ್ ಸಹದಿ, ಎಸ್.ಎಸ್.ಎಫ್.ಅಧ್ಯಕ್ಷರಾದ ಅಜೀಜ್ ಸಖಾಫಿ, ಹಂಸ ಕೊಟ್ಟಮುಡಿ, ಇಸ್ಮಾಯಿಲ್ ಸಖಾಫಿ ಮತ್ತಿತ್ತರರು ಇದ್ದರು.

-ಕೆ.ಎಂ ಇಸ್ಮಾಯಿಲ್ ಕಂಡಕರೆ