ಕೂಡಿಗೆ, ಫೆ. 6: ಕೂಡಿಗೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಪಂಚಾಯಿತಿಯು ವಿನೂತನ ಮಾದರಿಯಲ್ಲಿ ಕಂದಾಯ ವಸೂಲಿ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಮುಖ್ಯ. ಗ್ರಾಮದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರದ ಅನುಧಾನದ ಜೊತೆಗೆ ಗ್ರಾಮಸ್ಥರ ತೆರಿಗೆ ಹಣ ಮುಖ್ಯವಾಗಿರುತ್ತದೆ. ಗ್ರಾಮಸ್ಥರು ತಮ್ಮ ನೀರು ಕಂದಾಯ ಮತ್ತು ಮನೆ ಕಂದಾಯವನ್ನು ಈಗಾಗಲೇ ವಿವಿಧ ಸಮಸ್ಯೆಗಳಿಂದ ಬಾಕಿ ಉಳಿಸಿಕೊಂಡಿದ್ದು, ಈ ಸಾಲಿನಲ್ಲಿ ತಮ್ಮಗಳ ಮನೆ ಮನೆಗಳಿಗೆ ಬರುವ ಕಂದಾಯ ವಸೂಲಿದಾರರಿಗೆ ಕಂದಾಯವನ್ನು ಕಟ್ಟಿ ಸಹಕರಿಸಬೇಕು ಎಂದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿ.ಜೆ. ಲೋಕೇಶ್ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕೂಡಿಗೆ, ಹುದಗೂರು, ಮಲ್ಲೇನಹಳ್ಳಿ, ಬ್ಯಾಡಗೊಟ್ಟ, ಸೀಗೇಹೊಸೂರು, ಭುವನಗಿರಿ ಮುಂತಾದ ಗ್ರಾಮಗಳಿಗೆ ಗ್ರಾ.ಪಂ. ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಗ್ರಾಮಸ್ಥರು ಹಾಗೂ ಗ್ರಾಮದ ರೈತರು ಬೆಳೆ ಕಟಾವು ಮಾಡಿ ಮಾರಾಟ ಮಾಡುವ ಸಂದರ್ಭವಾದ್ದರಿಂದ ಗ್ರಾ.ಪಂ ನೀರು ಕಂದಾಯ ಹಾಗೂ ಮನೆ ಕಂದಾಯವನ್ನು ಕಟ್ಟಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು. ಕಂದಾಯ ವಸೂಲಿಗಾರರು ರಾತ್ರಿ 8 ಗಂಟೆವರಗೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಲಕ್ಷಗಟ್ಟ್ಟಲೇ ಹಣವನ್ನು ವಸೂಲಿ ಮಾಡಿರುತ್ತಾರೆ. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಹೆಚ್.ಎಸ್. ರವಿ, ಟಿ.ಕೆ. ವಿಶ್ವನಾಯತ, ಮಂಜಯ್ಯ, ಗ್ರಾ.ಪಂ. ಕಂದಾಯ ವಸೂಲಿಗಾರ ಕೆ.ಸಿ. ರವಿ, ಬಾಬು, ತಿಲಕ್ ಹಾಗೂ ಮೊದಲಾದವರು ಇದ್ದರು.