ಕುಶಾಲನಗರ, ಫೆ. 6: ಕುಶಾಲನಗರ ಜೆಸಿಐ ಕಾವೇರಿಯ 2019ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ.ಡಿ. ಪ್ರಶಾಂತ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಎಂ.ಎಸ್. ಅಭಿಷೇಕ್ ಅವರನ್ನು ನೇಮಿಸಲಾಗಿದೆ. ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಹಿರಿಯ ಜೆಸಿ ಸ್ಥಾಪಕ ಅಧ್ಯಕ್ಷರು ಹಾಗೂ ಸ್ಥಳೀಯ ಉದ್ಯಮಿಗಳಾದ ಬಿ.ಆರ್. ನಾಗೇಂದ್ರಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಬಿ.ಆರ್. ನಾಗೇಂದ್ರಪ್ರಸಾದ್, ಸಂಸ್ಥೆಯ ಮೂಲಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಯುವ ಜನಾಂಗದಲ್ಲಿ ಉತ್ತಮ ನಾಯಕತ್ವ ಬೆಳೆಸುವದು ಜೆಸಿ ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದರು. ಜೆಸಿ ಸಂಸ್ಥೆಯ ವಲಯ 15 ರ ಅಧ್ಯಕ್ಷ ಜಿತಿನ್ ಜಾಯ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ದುರ್ಬಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆ.ಡಿ. ಪ್ರಶಾಂತ್ ಮಾತನಾಡಿ, ಸಂಸ್ಥೆಯ ವತಿಯಿಂದ ಶೈಕ್ಷಣಿಕ, ಆರೋಗ್ಯ ಹಾಗೂ ಪರಿಸರ ಪೂರಕ ಕಾರ್ಯಕ್ರಮಗಳನ್ನು ಸಂಘಟಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಅಧ್ಯಕ್ಷ ಕೆ. ಪ್ರವೀಣ್, ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು, ಎ.ಪಿ. ಧನಂಜಯ ಮತ್ತಿತರರು ಇದ್ದರು.