ಸೋಮವಾರಪೇಟೆ, ಫೆ. 6: ಜಿಲ್ಲಾ ರಕ್ತನಿಧಿ ಕೇಂದ್ರ, ತಥಾಸ್ತು ಸಾತ್ವಿಕ ಸಂಸ್ಥೆ, ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್, ನಯನ ಮಹಿಳಾ ಸಂಘ ವತಿಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಾಗು ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರು ಮಾತನಾಡಿ, ರಕ್ತದಾನ ಪವಿತ್ರವಾದ ಕೆಲಸ; ಆರೋಗ್ಯವಂತ ವ್ಯಕ್ತಿ ರಕ್ತ ದಾನ ಮಾಡುವದರಿಂದ ಇನ್ನೊಂದು ಜೀವವನ್ನು ಉಳಿಸಬಹುದು ಹಾಗೂ ತಾನೂ ಆರೋಗ್ಯದಿಂದ ಇರಬಹುದು ಎಂದರು. ನಡೆದಾಡುವ ದೇವರು, ತ್ರೀವಿಧ ದಾಸೋಹಿಗಳಾದ ಸಿದ್ಧಗಂಗ ಸ್ವಾಮೀಜಿಗಳ ಪುಣ್ಯಸ್ಮರಣೆಯನ್ನು ರಕ್ತದಾನ ಶಿಬಿರದಿಂದ ಹಮ್ಮಿ ಕೊಂಡಿರುವದು ಶ್ಲಾಘನೀಯ ಎಂದು ಹೇಳಿದರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರಕ್ತದಾನ ಮನುಷ್ಯರು ಮಾತ್ರ ಮಾಡಬಹುದಾದ ದಾನವಾಗಿವೆ. ಇದು ಆರೋಗ್ಯವಂತ ಪ್ರಜೆಯ ಕರ್ತವ್ಯವೂ ಆಗಿದೆ. ರಕ್ತದಾನದಿಂದ ದೇಹದಲ್ಲಿ ಹೊಸರಕ್ತ ಉತ್ಪತ್ತಿಯಾಗಿ ಆರೋಗ್ಯವೂ ವೃದ್ಧಿಸುತ್ತದೆ ಎಂದರು. ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯರಾದ ಕರುಂಬಯ್ಯ ಮಾತನಾಡಿ, ಆರೋಗ್ಯವಂತ ವ್ಯಕ್ತಿ ರಕ್ತದಾನಕ್ಕೆ ಅರ್ಹನಾಗಿರುತ್ತಾನೆ. ಜಿಲ್ಲೆಯ ರಕ್ತನಿಧಿ ಕೇಂದ್ರದಲ್ಲಿ 150 ರಿಂದ 180 ಯೂನಿಟ್ಸ್ ರಕ್ತ ಸಂಗ್ರಹ ಮಾಡಬಹುದಾಗಿದೆ. ರಕ್ತವನ್ನು 35 ದಿನಗಳ ಕಾಲ ಮಾತ್ರ ಸಂಗ್ರಹ ಮಾಡಬಹುದಾಗಿರುವದರಿಂದ ಮಡಿಕೇರಿ ಕೇಂದ್ರದಲ್ಲಿ ಬೇಕಾಗುವಷ್ಟು ಮಾತ್ರ ರಕ್ತವನ್ನು ಸಂಗ್ರಹಿಸಿಡಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಶಿವಪ್ರಸಾದ್, ಬಿಟಿಸಿಜಿ ಕಾಲೇಜಿನ ಪ್ರಾಂಶುಪಾಲ ಶ್ರೀಧರ್, ತಥಾಸ್ತು ಸಂಸ್ಥೆಯ ಅಧ್ಯಕ್ಷ ರವೀಂದ್ರ ಹಾನಗಲ್, ಪಪಂ ಸದಸ್ಯೆ ಶೀಲಾ ಡಿಸೋಜ, ರೆಡ್ರಿಬ್ಬನ್ ಕ್ಲಬ್ನ ಪ್ರತಿನಿಧಿ ಅರ್ಚನಾ ಇದ್ದರು.