ಗೋಣಿಕೊಪ್ಪಲು, ಫೆ. 6: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ವಿದ್ಯಾರ್ಥಿ ಗಳಿಗಾಗಿ “ಮನಸ್ಸು, ನೆನಪಿನ ಶಕ್ತಿ ನಿರ್ವಹಣೆ ಮತ್ತು ವ್ಯಕ್ತಿತ್ವ ನಿರ್ಮಾಣ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಣಿಪಾಲ ಕೆ.ಎಂ.ಸಿ.ಯ ಮನೋ ವೈದ್ಯ ಡಾ. ಗಿರೀಶ್ ಮಾತನಾಡಿ, ಮನುಷ್ಯನನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಮನುಷ್ಯನ ಮನಸ್ಸನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದರು.

ವಿದ್ಯಾರ್ಥಿಗಳಿಗೆ ಮುಖ್ಯವಾಗಿ ತಾಳ್ಮೆ, ಏಕಾಗ್ರತೆ, ನೆನಪಿನ ಶಕ್ತಿ ಇರಬೇಕು. ತಾಳ್ಮೆ ಇದ್ದರೆ ಮಾತ್ರ ಏಕಾಗ್ರತೆ ಬರಲು ಸಾಧ್ಯ, ಏಕಾಗ್ರತೆಯಿಂದ ಓದಿದರೆ ನೆನಪಿನ ಶಕ್ತಿ ಉಳಿಯುತ್ತದೆ. ನೆನಪಿನ ಶಕ್ತಿ ಇದ್ದರೆ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಜಾಸ್ತಿಯಾಗಿರುವದೂ ಕೂಡ ನೆನಪಿನ ಶಕ್ತಿ ಕ್ಷೀಣಿಸಲು ಪ್ರಮುಖ ಕಾರಣವಾಗಿದೆ. ತಮಗೆ ಅರ್ಥವಾಗದಿರುವ ವಿಷಯದ ಬಗ್ಗೆ ವಿದ್ಯಾರ್ಥಿಗಳು ಯಾವದೇ ಕೀಳರಿಮೆಯಿಲ್ಲದೇ ಉಪನ್ಯಾಸಕರನ್ನು ಕೇಳಿ ತಿಳಿದುಕೊಳ್ಳಬೇಕು. ಪಾಠ ಕೇಳಿದರಷ್ಟೇ ಸಾಲದು ತಾವು ಕೇಳಿದ ಪಾಠದ ಬಗ್ಗೆ ಪರಸ್ಪರ ಚರ್ಚೆ ಮಾಡುವದರಿಂದ ಓದಿದ ವಿಷಯ ಬಹಳಷ್ಟು ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದರು. ಪ್ರಾಂಶುಪಾಲೆ ಎಸ್.ಆರ್. ಉಷಾಲತಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಕಾವ್ಯ, ಪೊನ್ನಪ್ಪ, ನಯನ ತಮ್ಮಯ್ಯ, ಪೊನ್ನಮ್ಮ ಇನ್ನಿತರರು ಇದ್ದರು.