ಮಡಿಕೇರಿ, ಫೆ. 6 : ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿರುವ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗಿನಲ್ಲಿ ಕನ್ನಡವನ್ನು ಅವಮಾನ ಮಾಡುವ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸುವದಾಗಿ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು, ಸರಕಾರಿ ಶಾಲೆಗೆ ಸೇರಲು ಸರಕಾರ 5ವರ್ಷ 10 ತಿಂಗಳ ವಯೋಮಿತಿಯನ್ನು ಹಾಕಿದೆ. ಆದರೆ ಖಾಸಗಿ ಶಾಲೆಗಳು 3 ವರ್ಷ 8 ತಿಂಗಳಿಗೇ ಮಕ್ಕಳನ್ನು ಸೇರಿಸಿಕೊಂಡು ಅವರು ಒಂದನೇ ತರಗತಿಗೆ ಸೇರುವ ವೇಳೆಗೆ ಅವರನ್ನು ಬುದ್ಧಿವಂತರನ್ನಾಗಿ ಮಾಡುತ್ತಿವೆ. ಇದರಿಂದಾಗಿ ಇಂದು ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳು ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಮುಂದುವರಿಯಲು ಸಾಧ್ಯವಾಗುತ್ತಿದ್ದು, ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಶೈಕ್ಷಣಿಕವಾಗಿ ಮಾತ್ರವಲ್ಲದೆ, ಉದ್ಯೋಗ ಪಡೆಯುವಲ್ಲೂ ಹಿಂದೆ ಬೀಳುತ್ತಿದ್ದಾರೆ ಎಂದು ಹೇಳಿದರು.

ಸರಕಾರ ವಿದ್ಯಾರ್ಥಿಗಳಿಗೆ ಸೈಕಲ್‍ಗಳನ್ನು ವಿತರಿಸುವ ಬದಲು ಎಲ್ಲಾ ಶಾಲೆಗಳಲ್ಲಿ ಖಾಸಗಿ ಶಾಲೆಗಳಂತೆ ಕನ್ನಡ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವಂತಾಗಬೇಕು. ಇದರಿಂದ ಮಕ್ಕಳ ಬುದ್ಧಿಮಟ್ಟ ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದ ಅವರು, ಸರಕಾರ ಪ್ರೌಢಶಾಲಾ ಮಕ್ಕಳಿಗೆ ವಿತರಿಸುವ ಸೈಕಲ್‍ಗಳು 3-4 ತಿಂಗಳುಗಳಲ್ಲೇ ಗುಜರಿ ಅಂಗಡಿಗಳಿಗೆ ಮಾರಾಟವಾಗುತ್ತಿವೆ. ಇದರಿಂದಾಗಿ ಅದಕ್ಕೆ ವಿನಿಯೋಗಿಸುವ ಹಣವನ್ನು ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಮತ್ತು ಮಕ್ಕಳಿಗೆ ವಾಹನ ವ್ಯವಸ್ಥೆ ಕಲ್ಪಿಸಲು ಮೀಸಲಿಡಬೇಕು ಎಂದು ಲೋಕೇಶ್ ಸಾಗರ್ ಸಲಹೆ ನೀಡಿದರು.

ಜಿಲ್ಲೆಯ ಸ್ಥಳನಾಮ ಹಾಗೂ ಕನ್ನಡ ನಾಮಫಲಕಗಳನ್ನು ಹಾಕುವಲ್ಲಿ ಕೆಲವು ಅಧಿಕಾರಿಗಳು ನಿರ್ಲಕ್ಷ್ಯ ತೋರುವದರೊಂದಿಗೆ ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಿದ್ದಾಪುರ ಗ್ರಾಮ ಪಂಚಾಯಿತಿ ಅಲ್ಲಿನ ಸ್ಥಳನಾಮವನ್ನೇ ತಪ್ಪಾಗಿ ಬರೆಸುವ ಮೂಲಕ ಕನ್ನಡಕ್ಕೆ ಅವಮಾನ ಮಾಡಲಾಗಿದೆ. ಅದನ್ನು ಸರಿಪಡಿಸದಿದ್ದಲ್ಲಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕಾನೂನು ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಕಸಾಪ ನಡೆಸಿದ ಹೋರಾಟದ ಫಲವಾಗಿ ಇದೀಗ ಅರಣ್ಯ ಇಲಾಖೆ ತನ್ನ ನಾಮಫಲಕಗಳನ್ನು ಬದಲಾಯಿಸಿರು ವದನ್ನು ಅವರು ಈ ಸಂದರ್ಭ ಉದಾಹರಣೆ ನೀಡಿದರು.

ಕನ್ನಡವÀನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರಕಾರ ಎಲ್ಲಾ ವ್ಯವಹಾರಗಳಲ್ಲಿ ಕನ್ನಡ ಬಳಸುವದರ ಜೊತೆಗೆ ಕನ್ನಡ ಅಂಕಿಗಳನ್ನೇ ಬಳಸುವಂತಾಗಬೇಕು ಎಂದು ಹೇಳಿದ ಅವರು, ಕನ್ನಡ ಅಂಕಿ ತಿಳಿಯದ ಅಧಿಕಾರಿಗಳಿಗೆ ತರಬೇತಿ ಸಂದರ್ಭ ಕನ್ನಡ ಅಂಕಿಗಳನ್ನು ಕಲಿಸುವಂತಾಗ ಬೇಕು. ನೆರೆಯ ರಾಜ್ಯಗಳಲ್ಲಿ ಅಲ್ಲಿನ ಮಾತೃಭಾಷೆಯ ಜೊತೆಗೆ ಅದೇ ಭಾಷೆಯ ಅಂಕಿಗಳನ್ನೇ ಬಳಸಲಾಗು ತ್ತಿದ್ದು, ಈ ನಿಯಮ ಕರ್ನಾಟಕದಲ್ಲೂ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಭಾರತ್ ಸಂಚಾರ್ ನಿಗಮ (ಬಿಎಸ್‍ಎನ್‍ಎಲ್)ವು ತನ್ನ ಗ್ರಾಹಕರು ಅಳವಡಿಸಿಕೊಂಡಿದ್ದ ಕನ್ನಡ ಹಾಡುಗಳ ‘ಕಾಲರ್ ಟ್ಯೂನ್’ಗಳನ್ನು ಗ್ರಾಹಕರ ಗಮನಕ್ಕೆ ತರದೆ ತೆಗೆದು ಹಾಕಿ ಆ ಜಾಗದಲ್ಲಿ ಆಂಗ್ಲ ಭಾಷೆಯ ಟ್ಯೂನ್‍ಗಳನ್ನು ಅಳವಡಿಸಿದೆ. ಮುಂದಿನ 15 ದಿನಗಳ ಒಳಗಾಗಿ ಸಂಸ್ಥೆಯು ತನ್ನ ತಪ್ಪನ್ನು ತಿದ್ದಿಕೊಂಡು ಹಿಂದಿನಂತೆಯೇ ಕನ್ನಡ ಟ್ಯೂನ್ ಗಳನ್ನು ಅಳವಡಿಸಲು ಅವಕಾಶ ಕಲ್ಪಿಸದಿದ್ದಲ್ಲಿ ಜಿಲ್ಲಾ ಬಿಎಸ್‍ಎನ್‍ಎಲ್ ಕಚೇರಿ ಎದುರು ಸಾಹಿತ್ಯ ಪರಿಷತ್ ಹಾಗೂ ಕನ್ನಡ ಪರ ಸಂಘಟನೆ ಗಳೊಂದಿಗೆ ಪ್ರತಿಭಟನೆ ನಡೆಸಲಾಗು ವದು ಎಂದು ಲೋಕೇಶ್ ಸಾಗರ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಕಾರ್ಯದರ್ಶಿ ಅಶ್ವಥ್‍ಕುಮಾರ್, ನಿರ್ದೇಶಕರುಗಳಾದ ಕೋಡಿ ಚಂದ್ರಶೇಖರ್ ಹಾಗೂ ಕೃಷ್ಣೇಗೌಡ ಉಪಸ್ಥಿತರಿದ್ದರು.