ಮಡಿಕೇರಿ, ಫೆ. 6: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಕಡಗದಾಳು ಸರ್ಕಾರಿ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಕಡಗದಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಶಿಬಿರ ನಡೆಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಉದ್ಘಾಟಿಸಿ ಮಾತನಾಡಿ, ಕಾನೂನಿನ ಜ್ಞಾನವಿದ್ದರೆ ಉತ್ತಮ ಬದುಕು ಸಾಗಿಸಬಹುದು.

ಕೆಲವೊಂದು ಸಂದರ್ಭ ಬೇರೆ ಬೇರೆ ಕಾರಣಗಳಿಂದಾಗಿ ಪ್ರಕರಣಗಳು ಬೆಳಕಿಗೆ ಬರಲು ತಡವಾಗುತ್ತಿದೆ. ಅಪ್ರಾಪ್ತ ಬಾಲಕ ಅಥವಾ ಬಾಲಕಿಯರು ಮಾನಸಿಕವಾಗಿ ಸದೃಢವಾಗಿರುವದಿಲ್ಲ. ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗಿರುತ್ತಾರೆ. ಇಂತಹ ಸಂದರ್ಭ ಬಂದಾಗ ಏನೂ ಭಯಪಡದೆ ಪೋಷಕರೊಡನೆ, ಶಿಕ್ಷಕರೊಡನೆ ಅಥವಾ ಅಂಗನವಾಡಿ ಕಾರ್ಯಕರ್ತೆ ಯರನ್ನು, ಪೊಲೀಸ್ ಇಲಾಖೆ ಯವರನ್ನು ಸಂಪರ್ಕಿಸಬೇಕು ಎಂದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಳಾದ ನೂರುನ್ನೀಸ ಅವರು ಮಾತನಾಡಿ, ಬಾಲ್ಯ ವಿವಾಹದಿಂದಾಗಿ ಆಗುವ ದೈಹಿಕ ಮತ್ತು ಮಾನಸಿಕ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್ ಮಾತನಾಡಿ, ಈ ಹಿಂದೆ ಲೈಂಗಿಕ ಶೋಷಣೆ ಅಥವಾ ಯಾವದೇ ದೌರ್ಜನ್ಯ ನಡೆದರೂ ಅರಿವಿಗೆ ಬರುತ್ತಿರಲಿಲ್ಲ. ಆದರೆ ಇಂದಿನ ಆಧುನಿಕತೆಯಿಂದಾಗಿ ಶೋಷಣೆ ವಿರುದ್ಧ ಹೋರಾಡಲು ಬಹಳಷ್ಟು ಮಾರ್ಗಗಳಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗಂಗಮ್ಮ ಮಾತನಾಡಿದರು. ಸರ್ಕಾರದ ವತಿಯಿಂದ ನೀಡಲಾದ 24 ಸೈಕಲನ್ನು ಗಣ್ಯರು ವಿದ್ಯಾರ್ಥಿಗಳಿಗೆ ವಿತರಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಬಿ.ಎಸ್. ಜಯಪ್ಪ ಸ್ವಾಗತಿಸಿದರೆ, ಆರತಿ ನಿರೂಪಿಸಿ, ವಂದಿಸಿದರು.