*ಸಿದ್ದಾಪುರ, ಫೆ. 6: ವಾಲ್ನೂರು–ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಭ್ಯತ್‍ಮಂಗಲ ಗ್ರಾಮದ ಕಾನನ ಕಾಡುವಿನಲ್ಲಿರುವ ಟಾಟಾ ಕಾಫಿ ಸಂಸ್ಥೆಯು ಕಾಫಿಯನ್ನು ಸಂಸ್ಕರಿಸಿದ ಕಲುಷಿತ ಪಲ್ಪಿಂಗ್ ನೀರನ್ನು ಸ್ಥಳೀಯ ತೋಡಿಗೆ ಹರಿಯಬಿಡುತ್ತಿದ್ದು, ಈ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಇಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಅಭಿದ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಟಾಟಾ ಸಂಸ್ಥೆಯ ನಿರ್ವಾಹಕರು ತಕ್ಷಣ ಪಲ್ಪಿಂಗ್ ನೀರು ಹರಿಯುತ್ತಿದ್ದ ಚರಂಡಿಯನ್ನು ಜೆಸಿಬಿ ಬಳಸಿ ಮಣ್ಣು ತುಂಬಿಸಿ ಮುಚ್ಚಿಸಿದರು. ತೋಡಿಗೆ ಸಂಸ್ಥೆಯು ಕಲುಷಿತ ನೀರು ಬಿಡುತ್ತಿದ್ದ ಬಗ್ಗೆ ಗ್ರಾ.ಪಂ.ಗೆ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮಾಭಿವೃದ್ಧಿ ಅಧಿಕಾರಿ ಅನಿಲ್ ಮತ್ತು ಸದಸ್ಯರು ಬೇಟಿ ನೀಡಿ ಪರಿಶೀಲನೆ ನಡೆಸಿ ಟಾಟಾ ಸಂಸ್ಥೆಯ ಪ್ರಮುಖರಿಗೆ ನೋಟೀಸ್ ಜಾರಿಗೊಳಿಸಿದ್ದರು.