ಮಡಿಕೇರಿ, ಫೆ. 6: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ ಸಿ.ವಿ. ರಾಮನ್ ವಿಜ್ಞಾನ ರಸಪ್ರಶ್ನೆಯ ಜಿಲ್ಲಾಮಟ್ಟದ ಸ್ಪರ್ಧೆ ನಡೆಯಿತು.
ಚೇರಂಬಾಣೆ ಶ್ರೀರಾಜರಾಜೇಶ್ವರಿ ಶಾಲೆಯ ಎಂ.ಕೆ. ಶ್ರೀವತ್ಸ ಮತ್ತು ಕೆ.ಟಿ. ಬಿದ್ದಪ್ಪ ಅವರನ್ನು ಒಳಗೊಂಡ ಶಾಲಾ ತಂಡವು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆಗೆ ಭಾಗವಹಿಸಲು ಅರ್ಹತೆ ಪಡೆಯಿತು. ಪ್ರಥಮ ಸ್ಥಾನ ಗಳಿಸಿದ ಈ ತಂಡಕ್ಕೆ ನಗದು ರೂ. 3 ಸಾವಿರ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಮಡಿಕೇರಿ ಸಂತ ಜೋಸೆಫರ ಬಾಲಕಿಯರ ಪ್ರೌಢಶಾಲೆಯ ಎಂ.ಹೆಚ್. ಅನನ್ಯ ಮತ್ತು ಟಿ. ಹಂಷಿತಾ ಅವರನ್ನು ಒಳಗೊಂಡ ಶಾಲೆಯ ತಂಡವು ದ್ವಿತೀಯ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ರೂ. 2 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಶಾಲೆಯ ತಂಡವು ತೃತೀಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ವಿಜ್ಞಾನ ಪುಸ್ತಕಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಒಟ್ಟು 43 ತಂಡಗಳು ಭಾಗವಹಿಸಿದ್ದವು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ರೂಪುಗೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ಕೈಗೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಹೊಂದಬೇಕು ಎಂದರು.
ಸರ್ವ ಶಿಕ್ಷಣ ಅಭಿಯಾನದ ಉಪ ಸಮನ್ವಯಾಧಿಕಾರಿ ಬೆಟ್ಟನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್, ವಿಜ್ಞಾನ ಪರಿಷತ್ತಿನ ವತಿಯಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ದಿಸೆಯಲ್ಲಿ ವೈವಿದ್ಯಮಯ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಎಂ. ಕಾತ್ಯಾಯಿನಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಬಿ.ಎಂ. ದೇವಮ್ಮ, ಕ್ವಿಜ್ ಮಾಸ್ಟರ್ಗಳಾದ ಸಿ.ಎಸ್. ಸುರೇಶ್, ಪಿ.ಆರ್. ಅಯ್ಯಪ್ಪ, ಶಿಕ್ಷಣ ಸಂಯೋಜಕ ಎಂ.ಹೆಚ್. ಹರೀಶ್, ಶಿಕ್ಷಕರಾದ ಹ್ಯೂ ಬರ್ಟ್ ಡಯಾಸ್, ಗ್ರೇಸಿ ಲೋಬೋ, ಗೀತಾ ಭಾವೆ ಮತ್ತಿತರರು ಇದ್ದರು.