ಮಡಿಕೇರಿ, ಫೆ. 6: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿಶೇಷ ಅಗತ್ಯತೆ ಇರುವಂತಹ ವಿವಿಧ ರೀತಿಯ ಹಿರಿಯರು, ಮಕ್ಕಳು ಇದ್ದು, ಈ ಬಗ್ಗೆ ನಿರ್ದಿಷ್ಟವಾದ ಸಂಖ್ಯೆ ಇಲ್ಲ. ಈ ನಿಟ್ಟಿನಲ್ಲಿ ಇಂತಹ ವಿಕಲಚೇತನರ ಸಮೀಕ್ಷೆಯನ್ನು ಆಯಾ ಜಿಲ್ಲಾವಾರು ಅಲ್ಲಿನ ಸಾಂಖ್ಯಿಕ ಮತ್ತು ಅಂಕಿ - ಅಂಶ ಇಲಾಖೆಯ ಮೂಲಕ ನಡೆಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನೂ ಸರಕಾರ ಹಾಗೂ ಇಲಾಖೆಯ ಮೂಲಕ ಸಿದ್ಧಪಡಿಸಲಾಗುತ್ತಿದೆ ಎಂದು ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನವಾಗಿರುವ ಸಂಬಂಧಿಸಿದ ಇಲಾಖೆಯ ಕೊಡಗು ಮೂಲದವರಾದ ಕುಟ್ಟಂಡ ಪಾಲಿದಿನೇಶ್ (ಎಂ.ಜಿ. ಪಾಲಿ- ತಾಮನೆ ಮರುವಂಡ) ಅವರು ತಿಳಿಸಿದ್ದಾರೆ.
‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು ವಿಕಲ ಚೇತನರಲ್ಲಿ ಹಲವು ಬಗೆಯಲ್ಲಿ ಸಮಸ್ಯೆ ಇರುವವರು ಇದ್ದಾರೆ, ಬುದ್ಧಿಮಾಂದ್ಯರು, ದೃಷ್ಟಿದೋಷ, ಶ್ರವಣದೋಷ, ಅಂಗಾಂಗ ವೈಫಲ್ಯತೆ ಈ ರೀತಿಯಲ್ಲಿ ಬಗೆಬಗೆಯ
(ಮೊದಲ ಪುಟದಿಂದ) ತೊಂದರೆ ಎದುರಿಸುತ್ತಿರುವವರು ಇದ್ದಾರೆ. ಆದರೆ ಇಂತಹ ಅಗತ್ಯತೆ ಇರುವವರ ಬಗ್ಗೆ ನಿಖರ ಮಾಹಿತಿ ಇಲ್ಲದಿರುವದನ್ನು ಪರಿಗಣಿಸಿ ಸರಕಾರ ಸಮೀಕ್ಷೆಗೆ ಚಿಂತನೆ ನಡೆಸಿದೆ. ಅಗತ್ಯತೆ ಇರುವವರಿಗಾಗಿ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದಿಂದ ಸಾಕಷ್ಟು ಯೋಜನೆಗಳಿದ್ದು, ಇವುಗಳನ್ನು ಸಮರ್ಪಕವಾಗಿ ತಲಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆಯೂ ಹಲವಾರು ಸಮಸ್ಯೆಗಳಿದ್ದು, ಹಿರಿಯರಿಗೆ ನೆರವಾಗುವ ಯೋಜನೆಗಳೂ ಸಾಕಷ್ಟಿವೆ. ವಿವಿಧ ಸಂಘ- ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದೆ ಬಂದಲ್ಲಿ ಇಲಾಖೆಯ ಮೂಲಕ ಸಹಕಾರ ನೀಡಲಾಗುವದು ಎಂದು ಅವರು ತಿಳಿಸಿದರು. ಇದಕ್ಕೆ ಹಲವು ನಿಬಂಧನೆಗಳಿದ್ದು, ಇದನ್ನು ಆಯಾ ಸಂಸ್ಥೆಗಳು ಪಾಲಿಸಬೇಕಾಗಿದೆ. ಪ್ರಸ್ತುತ ವಿಕಲಚೇತನರಿಗೆ ಸೂಕ್ತ ಮಾರ್ಗದರ್ಶನ, ಸಹಕಾರ ನೀಡಲು ಇದರಲ್ಲಿ ತರಬೇತಿ ಹೊಂದಿರುವ ವಿಶೇಷ ಶಿಕ್ಷಕರ ಕೊರತೆ ಇದೆ ಎಂದು ತಿಳಿಸಿದ ಅವರು, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಡಿಮೆ ಇರುವದಾಗಿ ಹೇಳಿದರು. ಜಿಲ್ಲೆಯಲ್ಲೂ ವೃದ್ಧಾಶ್ರಮ, ಅಥವಾ ಇನ್ನಿತರ ವಿಕಲಚೇತನರಿಗೆ ನೆರವಾಗುವ ನಿಟ್ಟಿನಲ್ಲಿ ಸಂಘ- ಸಂಸ್ಥೆಗಳು ನಿಯಮಾನುಸಾರ ಮುಂದೆ ಬಂದಲ್ಲಿ ಪರಿಗಣಿಸಲಾಗುವದು ಎಂದರು.
ಪಾಲಿ ಅವರ ಕುರಿತು...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಬರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಪಾಲಿ ಅವರು ಉಪನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಇಲಾಖೆಯಲ್ಲಿ ಇವರ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ಪ್ರಸಕ್ತ ವರ್ಷ ಜರುಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇವರಿಗೆ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಜನವರಿ 26ರಂದು ಬೆಂಗಳೂರಿನ ಮಾಣಿಕ್ಷಾ ಪೆರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿವಾಲಾ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಪಾಲಿ ಅವರು ಮೂಲತಃ ಅಮ್ಮತ್ತಿಯವರಾದ ಕುಟ್ಟಂಡ ದಿನೇಶ್ ಅವರ ಪತ್ನಿಯಾಗಿದ್ದು, ಹಲವು ವರ್ಷದಿಂದ ಬೆಂಗಳೂರಿನ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಉಪನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.