ವೀರಾಜಪೇಟೆ, ಫೆ. 6 : ವೀರಾಜಪೇಟೆಯ ಪಂಜರ್‍ಪೇಟೆ ಯಲ್ಲಿ ನಿನ್ನೆ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಶಫೀಕ್ (42) ಎಂಬವರ ಕುತ್ತಿಗೆಯನ್ನು ಡ್ರಾಗನ್‍ನಿಂದ ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ವೀರಾಜಪೇಟೆ ನಗರ ಪೊಲೀಸರು ಸಿನೀಮೀಯ ಮಾದರಿಯಲ್ಲಿ ಮೂವರು ಆರೋಪಿಗಳನ್ನು ಸ್ಥಳದಲ್ಲಿಯೇ ಬಂಧಿಸುವಲ್ಲಿ ಸಫಲರಾಗಿದ್ದಾರೆ.ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ಎಂ.ದರ್ಶನ್ ಹಾಗೂ ಶಫೀಕ್ ಇಬ್ಬರು ಬಾಲ್ಯ ಸ್ನೇಹಿತರು. ರಿಯಲ್ ಎಸ್ಟೇಟ್ ಹಾಗೂ ಕಾಫಿ ಖರೀದಿ ವ್ಯವಹಾರ ಒಟ್ಟಿಗೆ ಮಾಡುತ್ತಿದ್ದರು. ಹತ್ತು ವರ್ಷಗಳ ಹಿಂದೆ ಶಫೀಕ್‍ಗೆ ಸೇರಿದ ಪಾಳು ಬಿದ್ದಿದ್ದ ಕಾಫಿ ತೋಟವನ್ನು ದರ್ಶನ್ ಖರೀದಿಸಿದ್ದರು.

ಕೆಲವು ದಿನಗಳಿಂದ ದರ್ಶನ್ ಹಾಗೂ ಶಫೀಕ್ ನಡುವೆ ಹಣದ ವ್ಯವಹಾರದಲ್ಲಿ ವಿವಾದ ಉಂಟಾಗಿತ್ತು. ನಿನ್ನೆ ದಿನ ಶಫೀಕ್ ಒಬ್ಬನೇ ಮನೆಯಲ್ಲಿರುವದನ್ನು ಗಮನಿಸಿದ ದರ್ಶನ್ ಸಂಗಡಿರೊಡನೆ ರಾತ್ರಿ ಶಫೀಕ್‍ನ ಮನೆಗೆ ತೆರಳಿ ಮನೆಯಲ್ಲಿ ಮಲಗಿದ್ದವನನ್ನು ಕರೆದು ಆತನ ಕುತ್ತಿಗೆ ಹಾಗೂ ಎದೆಯ ಭಾಗವನ್ನು ಡ್ರಾಗನ್‍ನಿಂದ ಇರಿದಿದ್ದಾರೆ. ಆತನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಶಫೀಕ್ ಸಾಯುವ ಮೊದಲು ಕೂಗಿಕೊಂಡಾಗ ಪಕ್ಕದ ಮನೆಯ ಮುಸ್ತಾಫ ಬಂದು ನೋಡಿದಾಗ ಮೂವರು ಮನೆಯ ಮುಂದಿನ ಬಾಗಿಲಿಗೆÀ ಚಿಲಕ ಹಾಕಿ ಶ್ವಾನ ದಳವು ಆರೋಪಿಗಳ ಸುಳಿವು ಪತ್ತೆ ಹಚ್ಚದಂತೆ ಶವದ ಮೇಲೆ ಟಿಎಂಟಿ ಕ್ರಿಮಿನಾಶಕ ಔಷಧಿಗಳನ್ನು ಸಿಂಪಡಿಸಿದ್ದಾರೆ.ರಾತ್ರಿ 10.15ರ ವೇಳೆಗೆ ಭಯದ ವಾತಾವರಣದಲ್ಲಿಯೇ ಮುಸ್ತಾಫ ನಗರ ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ ನಗರ ಪೊಲೀಸ್ ಠಾಣೆಯ ಇನ್‍ಚಾರ್ಜ್ ಸಬ್ ಇನ್ಸ್

ಪೆಕ್ಟರ್ ಬೋಪಣ್ಣ ಬುಲ್ಲೆಟ್ ಪ್ರೂಫ್ ಹೆಲ್ಮೆಟ್ ಹಾಗೂ ಜಾಕೆಟ್ ಧರಿಸಿ ಸ್ಥಳಕ್ಕೆ ಬಂದಾಗ ಮನೆಯೊಳಗೆ ಔಷಧಿಯ ಹೊಗೆಯಿಂದ ಏನೂ ಕಾಣುತ್ತಿರಲಿಲ್ಲ. ಮನೆಯ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ ನಂತರ ಮನೆಯ ಮುಂದಿನ ಬಾಗಿಲನ್ನು ಮುರಿದು ಒಳ ನುಗ್ಗಿದ ಪೊಲೀಸರ ತಂಡ ಹಿಂಭಾಗಿಲಿನಿಂದ ಓಡಲು ಯತ್ನಿಸಿದ ದರ್ಶನ್, ತಮಿಳರ ಜೀವನ್ ಹಾಗೂ ತೋಟದ ಕೂಲಿ ಕಾರ್ಮಿಕ ಅಸ್ಸಾಂನ ರೋಯಲ್ (ಮೊದಲ ಪುಟದಿಂದ) ಎಂಬ ಮೂವರಿಗೆ ರಿವಾಲ್ವರ್ ತೋರಿಸಿ ಗುಂಡು ಹಾರಿಸುವ ಪ್ರಯತ್ನದಲ್ಲಿದ್ದಾಗ ಮಂಚದ ಕೆಳಗೆ ಅವಿತುಕೊಳ್ಳಲು ವಿಫಲಗೊಂಡು ಮೂವರು ಅಲ್ಲಿಯೇ ಪೊಲೀಸರ ಮುಂದೆ ಶರಣಾಗಿದ್ದಾರೆ.

ಶಫೀಕ್ ಅವರ ಪತ್ನಿ ಶಫೀನಾ ತವರು ಮನೆಯ ಬೇತರಿ ಗ್ರಾಮಕ್ಕೆ ತೆರಳಿದ್ದರು. ಶಫೀಕ್ ವಿವಾಹವಾಗಿ ಐದು ವರ್ಷಗಳಾಗಿದ್ದರೂ, ಮಕ್ಕಳಿಲ್ಲ ಎಂಬ ಕೊರಗಿತ್ತು. ಆಜು ಬಾಜಿನ ನಿವಾಸಿ ಮಹಮ್ಮದ್ ರಾಫಿಯ ಪ್ರಕಾರ ಶಫೀಕ್ ಸಂಗಡಿಗ ದರ್ಶನ್‍ಗೆ ರೂ. 12 ಲಕ್ಷ ಸಾಲವಾಗಿ ನೀಡಿದ್ದು, ಪತ್ನಿ ಶಫೀನಾಗೆ ಗೊತ್ತಿತ್ತು.

ಪೊಲೀಸರು ಕೃತ್ಯಕ್ಕೆ ಬಳಸಿದ ಮಾರುತಿ ಕಾರು ಹಾಗೂ ಮೂರು ಮಂದಿಯ ಜೊತೆಯಲ್ಲಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಕೃತ್ಯ ನಡೆದ ಸ್ಥಳಕ್ಕೆ ಇಂದು ಅಡಿಷನಲ್ ಎಸ್.ಪಿ. ಬಲರಾಮೇಗೌಡ, ಡಿವೈಎಸ್‍ಪಿ ನಾಗಪ್ಪ, ಭೇಟಿ ನೀಡಿ ಮಹಜರು ನಡೆಸಿದರು.

ಶಫೀಕ್‍ನ ಮನೆಯ ಬಳಿ ಜನ ಜಂಗುಳಿಯನ್ನು ತಡೆಯಲು ಪೊಲೀಸರು ಮೃತ ದೇಹವನ್ನು ರಾತ್ರಿಯೇ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿದ್ದರು. ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಆಸ್ಪತ್ರೆಯ ಶವಗಾರದ ಬಳಿ ಜನರು ಕಿಕ್ಕಿರಿದು ನೆರೆದಿದ್ದರು. ತಮಿಳರ ಜೀವನ್ ಕಳೆದ 7 ವರ್ಷಗಳ ಹಿಂದೆ ಇಲ್ಲಿನ ಕೊಡವ ಸಮಾಜದ ಬಳಿ ನಡೆದ ಕಾಳಪ್ಪ ಎಂಬವರ ಕೊಲೆಯಲ್ಲಿಯೂ ಆರೋಪಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಅಂತ್ಯಕ್ರಿಯೆ : ಇಂದು ಬೆಳಗ್ಗಿನಿಂದಲೇ ಮುಂಜಾಗೃತಾ ಕ್ರಮವಾಗಿ ಪೊಲೀಸರು ವಿಶೇಷ ಬಂದೋಬಸ್ತ್ ಏರ್ಪಡಿಸಿದ್ದರು. ಅಪರಾಹ್ನ 12.45 ಗಂಟೆಗೆ ಶಫೀಕ್‍ನ ಅಂತ್ಯಕ್ರಿಯೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಖಬರ್‍ಸ್ತಾನದಲ್ಲಿ ನೆರವೇರಿತು.

ಮೃತದೇಹವಿಟ್ಟು ಪ್ರತಿಭಟನೆ :ಡ್ರಾಗನ್‍ನಿಂದ ಭೀಕರ ಹತ್ಯೆಗೊಳಗಾದ ಶಫೀಕ್‍ನ ಮೃತ ದೇಹವನ್ನು ಇಂದು ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಜುಮಾ ಮಸೀದಿ ಮುಂದೆ ಇಟ್ಟು ಮುಸ್ಲಿಂ ಸಮುದಾಯದ ಮಂದಿ ಪ್ರತಿಭಟನೆ ನಡೆಸಿದರು.

ಪಂಜರ್‍ಪೇಟೆಯಿಂದ ಮಲಬಾರ್ ರಸ್ತೆಯಲ್ಲಿರುವ ಖಬರಸ್ತಾನಕ್ಕೆ ಹೋಗುವ ಹಾದಿಯಲ್ಲಿರುವ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಅಡಿಷನಲ್ ಎಸ್.ಪಿ. ಬಲರಾಮೇಗೌಡ ಅವರು ಮುಸ್ಲಿಂ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸುವದಾಗಿ ಭರವಸೆ ನೀಡಿದ ನಂತರ ಮೃತದೇಹದ ಅಂತ್ಯಕ್ರಿಯೆಯ ಮೆರವಣಿಗೆ ಮುಂದುವರೆಯಿತು.

ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಎಚ್.ಮತೀನ್ ಹಾಗೂ ಏಜಾಜ್ ಅಹಮ್ಮದ್ ಅಲ್ಪ ಸಂಖ್ಯಾತರಿಗೆ ಇಲಾಖೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.