ಕೂಡಿಗೆ, ಫೆ. 6: ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯತ್ತ ಹೆಚ್ಚು ಜನರು ಅವಲಂಭಿಸುತ್ತಿದ್ದಾರೆ. ವಾಣಿಜ್ಯ ಬೆಳೆಯಲ್ಲಿ ಶುಂಠಿ ಬೆಳೆಯು ಮುಖ್ಯವಾಗಿದ್ದು, ಇದೀಗ ಶುಂಠಿ ಬೆಳೆ ಬಿತ್ತನೆಯ ಸಮಯವಾದ ಹಿನ್ನೆಲೆ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ವಾಣಿಜ್ಯ ಬೆಳೆಯನ್ನು ಬೆಳೆದು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಸಾಲಿನಲ್ಲಿ ಶುಂಠಿ ಬಿತ್ತನೆ ಬೀಜನೆಯ ಬೆಲೆ ಗಗನಕ್ಕೇರಿ ನಿಂತಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ರೈತರು ಶುಂಠಿ ಬಿತ್ತನೆ ಮಾಡಲು ಶುಂಠಿ ಬಿತ್ತನೆ ಬೀಜದ ಬೆಲೆಯು ಒಂದು ಚೀಲ (ಪರಿಷ್ಕೃತಗೊಂಡ ಬಿತ್ತನೆ ಬೀಜ 60 ಕೆ.ಜಿ.) ಒಂದು ಸಾವಿರದಿಂದ ಎರಡು ಸಾವಿರವಿದ್ದು, ಈ ಸಾಲಿನಲ್ಲಿ ಒಂದು ಚೀಲ ಬಿತ್ತನೆ ಬೀಜಕ್ಕೆ ನಾಲ್ಕು ಸಾವಿರದಿಂದ ಐದೂವರೆ ಸಾವಿರದವರೆಗೆ ಬೆಲೆ ಏರಿಕೆಯಾಗಿದೆ.

ಶುಂಠಿಗೆ ಮಾರುಕಟ್ಟೆ ಬೆಲೆಯೇ 3200 ರೂ.ಗಳಾಗಿದ್ದು, ಬಿತ್ತನೆ ಬೀಜದ ಬೆಲೆಯು ಐದು ಸಾವಿರ ರೂಪಾಯಿ ದಾಟಿರುವದರಿಂದ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚು ಶುಂಠಿ ಬೆಳೆಗಾರರಿದ್ದರೂ ತಮ್ಮ ಅಲ್ಪ ಜಮೀನಿನಲ್ಲಿ ನೀರಿನ ಸೌಕರ್ಯವನ್ನು ಹೊಂದಿಸಿಕೊಂಡಿದ್ದರೂ ಬಿತ್ತನೆ ಬೀಜ ಖರೀದಿಸಲಾಗದೇ ಶುಂಠಿ ಬೆಳೆಯಿಂದ ದೂರ ಉಳಿಯುವಂತಾಗಿದೆ.

ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕೆಲ ಪ್ರಗತಿ ಪರ ರೈತರು ಉತ್ತಮವಾದ ಪರಿಷ್ಕೃತ ಶುಂಠಿ ಬಿತ್ತನೆ ಬೀಜ ಸಿಗದ ಕಾರಣ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹಾಗೂ ಸಕಲೇಶಪುರದಲ್ಲಿ ಅಧಿಕ ಹಣ ನೀಡಿ ಬಿತ್ತನೆ ಬೀಜ ಖರೀದಿಸುವ ಪ್ರಸಂಗ ನಡೆಯುತ್ತಿದೆ.

ಪ್ರಗತಿಪರ ರೈತ ವಿಶ್ವನಾಥ್ ಮಾತನಾಡಿ, ಈಗ ಸಹಕಾರ ಸಂಘದಿಂದ ಸಾಲ ಪಡೆದು ಅಧಿಕ ಹಣ ನೀಡಿ ಶುಂಠಿ ಬೇಸಾಯ ಮಾಡುತ್ತಿದ್ದೇವೆ. ಬೆಳೆ ಮಾರಾಟದ ವೇಳೆ ಶುಂಠಿ ಬೆಳೆ ಕುಸಿದರೇ ಭಾರೀ ನಷ್ಟವಾಗಲಿದೆ ಎಂದರು. - ಕೆ.ಕೆ. ನಾಗರಾಜಶೆಟ್ಟಿ.