ಸೋಮವಾರಪೇಟೆ, ಫೆ. 6: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದಿಂದ ಶಾಲಾಭಿವೃದ್ಧಿ ಸಮಿತಿ ಹಾಗೂ ಸಂಘದ ಸದಸ್ಯರಿಗೆ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.
ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಟಿ. ತಿಮ್ಮಶೆಟ್ಟಿ, ಮಾಜಿ ಉಪ ಪ್ರಧಾನಿ ಸರ್ದಾರ್ ಪಟೇಲ್‍ರ ದಿಟ್ಟ ನಿಲುವು ಹಾಗೂ ಅನೇಕ ಹಿರಿಯರ ಪ್ರಾಮಾಣಿಕ ಸೇವೆಯಿಂದಾಗಿ ದೇಶದಲ್ಲಿದ್ದ ಐದುನೂರಕ್ಕೂ ಹೆಚ್ಚಿನ ಸಂಸ್ಥಾನಗಳನ್ನು ಒಗ್ಗೂಡಿಸಲು ಸಾಧ್ಯವಾಯಿತು ಎಂದರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ದೇಶ ಕಟ್ಟಲು ಅನೇಕ ಹಿರಿಯರ ತ್ಯಾಗ ಬಲಿದಾನವಾಗಿದೆ. ಇಂತಹ ರಾಷ್ಟ್ರ ನಾಯಕರ ಆದರ್ಶಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನಾಂಗ ಅಳವಡಿಸಿಕೊಳ್ಳಬೇಕೆಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಎಸ್.ಎ. ಮುರಳೀಧರ್, ಶಾಲೆಯ ಪದವೀಧರ ಮುಖ್ಯೋಪಾಧ್ಯಾಯರಾದ ಎಂ.ಜೆ. ಅಣ್ಣಮ್ಮ, ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಎಸ್.ಡಿ. ವಿಜೇತ್, ಖಜಾಂಚಿ ಎಂ.ಎಂ. ಸುರೇಶ್, ಎಸ್‍ಡಿಎಂಸಿ ಉಪಾಧ್ಯಕ್ಷೆ ಪೌಲಿನ್ ಇದ್ದರು. ಎಸ್‍ಡಿಎಂಸಿ ಅಧ್ಯಕ್ಷ ಕುಶಲ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.