ಕೂಡಿಗೆ, ಫೆ. 7: ಕೂಡ್ಲೂರಿನ ಕೈಗಾರಿಕಾ ಬಡಾವಣೆಯಲ್ಲಿರುವ ಮಹಿಳೆಯರ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರಕ್ಕೆ (ಎಂಎಸ್ಪಿಸಿ) ಸೋಮವಾರಪೇಟೆ ತಾ.ಪಂ. ಸದಸ್ಯ ಗಣೇಶ್ ಭೇಟಿ ನೀಡಿ ಕೇಂದ್ರದ ಪರಿಶೀಲನೆ ನಡೆಸಿದರು.
ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರದ ಮಹಿಳಾ ನೌಕರರು ಹೇಳಿದ ಹಲವು ಸಮಸ್ಯೆಗಳನ್ನು ಆಲಿಸಿದರು.
ಮಹಿಳೆಯರ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರದ ಗೋದಾಮು ಈಗಾಗಲೇ ಶಿಥಿಲಾವಸ್ಥೆ ಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಬೃಹತ್ ಪ್ರಮಾಣದ ಆಹಾರ ಸಾಮಗ್ರಿಗಳನ್ನು ದೀರ್ಘ ಕಾಲದವರೆಗೆ ಸಂಸ್ಕರಿಸಿ, ಸುರಕ್ಷಿತವಾಗಿಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಈ ಗೋದಾಮಿನ ಮೇಲ್ಛಾವಣೆಯ ಸೋರುವಿಕೆ ಯಿಂದಾಗಿ ಆಹಾರ ಪದಾರ್ಥಗಳು ಹಾಳಾಗುತ್ತಿವೆ.
ಈ ಘಟಕದಲ್ಲಿ ಸುಮಾರು 19 ಮಹಿಳಾ ನೌಕರರು ಕಾರ್ಯನಿರ್ವ ಹಿಸುತ್ತಿದ್ದಾರೆ. ಗರ್ಭಿಣಿ, ಬಾಣಂತಿ ಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರವನ್ನು ನೀಡುತ್ತಿರುವದರಿಂದ ಇವರಿಗೆ ಇಲಾಖೆಯಿಂದ ಸರಬರಾಜಾಗುತ್ತಿದ್ದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸ್ಥಗಿತಗೊಳಿಸಲಾಗಿದೆ. ಇಲಾಖೆಯ ಮುಖ್ಯ ಕಚೇರಿಯಿಂದ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಸರಬರಾಜಾಗುತ್ತಿತ್ತು. ಆದರೆ ಈಗ ಕಡಿಮೆ ಗುಣಮಟ್ಟದ ಆಹಾರ ಪದಾರ್ಥಗಳು ಸರಬರಾಜಾಗುತ್ತಿದ್ದು ಅವುಗಳಲ್ಲಿ ಕಸಗಳು ಇದ್ದು, ದೊಡ್ಡ ಪ್ರಮಾಣದಲ್ಲಿ ಶುದ್ಧೀಕರಿಸಿ ಬೇರ್ಪಡಿಸುವ ಸಂದರ್ಭದಲ್ಲಿ ನಿರುಪಯುಕ್ತ ಕಸವೆ ಒಂದರಿಂದ ಎರಡು ಕ್ವಿಂಟಾಲ್ ಆಗುತ್ತಿದೆ. ಇದರಿಂದ ತಿಂಗಳಿಗೆ 20 ರಿಂದ 23 ಲಕ್ಷದವರೆಗೆ ವಹಿವಾಟು ನಡೆಯುತ್ತಿತ್ತು. ಇದೀಗ 10 ಲಕ್ಷ ವಹಿವಾಟಿಗೆ ಬಂದು ನಿಂತಿದೆ. ಇಲಾಖೆಯಿಂದ ನೀಡುತ್ತಿದ್ದ ಶೇಕಡಾವಾರು ಶೇ.20 ರಷ್ಟು ಅನುದಾನವು ಶೇ.18 ಕ್ಕೆ ಬಂದಿದೆ. ಆಹಾರ ಸಾಮಗ್ರಿಗಳ ಪ್ಯಾಕಿಂಗ್ ಕಾರ್ಯಗಳಿಗೆ ಹೆಚ್ಚಿನ ವೆಚ್ಚ ತಗುಲುತ್ತಿದೆ. ಇಲ್ಲಿನ ಆದಾಯಕ್ಕಿಂತ ಖರ್ಚು ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳವರೆಗೆ ಆಗುತ್ತಿದ್ದು ಆದಾಯಕ್ಕಿಂತ ಖರ್ಚು ಅಧಿಕವಾಗುತ್ತಿದೆ. ಇದರಿಂದ ಸ್ತ್ರೀಶಕ್ತಿ ಮಹಿಳಾ ಸಂಘಟನೆಯಲ್ಲಿ ನಡೆಯುತ್ತಿ ರುವ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರವು ಬಹಳ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಮಹಿಳಾ ಪೂರಕ ಆಹಾರ ಉತ್ಪಾದನಾ ಕೇಂದ್ರದ ಕಾರ್ಯದರ್ಶಿ ಪ್ರಿಯದರ್ಶಿನಿ ಹೇಳಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದ ದುರಸ್ತಿ ಕಾರ್ಯ ಮತ್ತು ಇಲ್ಲಿನ ನೌಕರರ ಸಂಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸಬೇಕೆಂದು ಮಹಿಳಾ ಪೂರಕ ಆಹಾರ ಉತ್ಪಾದನಾ ಕೇಂದ್ರದ ಮಹಿಳೆಯರು ಆಗ್ರಹಿಸಿದ್ದಾರೆ.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಅವರು ಮಾತನಾಡಿ, ಉತ್ಪಾದನಾ ಕೇಂದ್ರದ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ತಾ.ಪಂ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸ್ಥಳ ಪರಿಶೀಲಿಸಿ, ತುರ್ತಾಗಿ ಕ್ರಮಗಳನ್ನು ತೆಗೆದು ಕೊಳ್ಳುವಂತೆ ಸೂಚಿಸಲಾಗುವದು ಎಂದರು. - ಕೆ.ಕೆ. ನಾಗರಾಜಶೆಟ್ಟಿ.