ಮಡಿಕೇರಿ, ಫೆ. 7: ಜಿಲ್ಲೆಯಾದ್ಯಂತ ತಾ.8 ರಂದು (ಇಂದು) ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಹಾಗೂ ತಾ.14 ರಂದು ಮೋಪ್ ಅಪ್ ಡೇ ಕಾರ್ಯಕ್ರಮ ನಡೆಯಲಿದ್ದು, 1 ರಿಂದ 19 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಆಲ್‍ಬೆಂಡಜೋಲ್- 400 ಎಂಜಿ ಮಾತ್ರೆಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಇದು ಮಕ್ಕಳ ಬೆಳವಣಿಗೆಗೆ ಹಾಗೂ ಆರೋಗ್ಯಕ್ಕೆ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಜಗದೀಶ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಸ್ವಚ್ಛ ಭಾರತ್ ಮಿಷನ್, ಪಂಚಾಯತ್ ರಾಜ್, ಮುನ್ಸಿಪಲ್ ಕಾರ್ಪೋರೇಷನ್, ಸ್ಕೌಟ್ ಮತ್ತು ಗೈಡ್ಸ್ ಮತ್ತು ಹಲವು ಎನ್‍ಜಿಒಗಳ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 1 ರಿಂದ 19 ವರ್ಷದ ಒಳಗಿನ 1,26,894 ಮಕ್ಕಳ ಗುರಿ ಹೊಂದಿದ್ದು, ಇದರಲ್ಲಿ ಅಂಗನವಾಡಿಯ 30,865 ಮತ್ತು ಅಂಗನವಾಡಿಯಿಂದ ಹೊರಗುಳಿದ 2805 ಮಕ್ಕಳು, ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯ 76,319 ಮಕ್ಕಳು ಹಾಗೂ ಪದವಿ ಪೂರ್ವ ಕಾಲೇಜು ವ್ಯಾಸಂಗ ಮಾಡುತ್ತಿರುವ 16,905 ಮಕ್ಕಳಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೆ ಅವಶ್ಯಕತೆಯಿರುವ ಆಲ್‍ಬೆಂಡಜೋಲ್-400ಎಂಜಿ ಮಾತ್ರೆಗಳನ್ನು ಈಗಾಗಲೇ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಎಲ್ಲಾ ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಸರಬರಾಜು ಮಾಡಲಾಗಿರುತ್ತದೆ. ಇದಕ್ಕಾಗಿ ಒಟ್ಟು 731 ಶಾಲೆ/ಕಾಲೇಜು ನೋಡಲ್ ಶಿಕ್ಷಕರು, 869 ಅಂಗನವಾಡಿ ಹಾಗೂ 441 ಆಶಾ ಕಾರ್ಯಕರ್ತೆಯರಿಗೆ ಎನ್‍ಡಿಡಿ ಕಾರ್ಯಕ್ರಮದ ಬಗ್ಗೆ ತರಬೇತಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಗಾಳಿಬೀಡು ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ “ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ” ಹಾಗೂ ತಾ. 14 ರಂದು ಮೋಪ್ ಅಪ್ ಡೇ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಮತ್ತು ಪೋಷಕರು ಕೂಡ ಪ್ರೋತ್ಸಾಹ ನೀಡುವಂತೆ ಅವರು ತಿಳಿಸಿದರು. ಆರ್‍ಸಿಎಚ್ ಅಧಿಕಾರಿ ಡಾ. ಆನಂದ್ ಇತರರು ಇದ್ದರು.