ಗೋಣಿಕೊಪ್ಪ ವರದಿ, ಫೆ. 7 : ಇಲ್ಲಿನ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ಕಾಲೇಜು ಬೋಧಕ- ಬೋಧಕೇತರ ಸಿಬ್ಬಂದಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಕ್ರಿಕೆಟ್ ಹಾಗೂ ಥ್ರೋಬಾಲ್ ವಿಭಾಗಗಳಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಗೋಣಿಕೊಪ್ಪ ಕಾವೇರಿ ಪದವಿ, ಪದವಿಪೂರ್ವ ಕಾಲೇಜು ಹಾಗೂ ಕಾವೇರಿ ಎಜುಕೇಷನ್ ಸೊಸೈಟಿ ಸಹಯೋಗದಲ್ಲಿ ಪುರುಷರ ಕ್ರಿಕೆಟ್ನಲ್ಲಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ತಂಡ ಪ್ರಥಮ, ವೀರಾಜಪೇಟೆ ಕಾವೇರಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಥ್ರೋಬಾಲ್ನಲ್ಲಿ ಫೀ. ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ತಂಡ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.
ಮಹಿಳೆಯರ ಬ್ಯಾಡ್ಮಿಂಟನ್ ನಲ್ಲಿ ಗೋಣಿಕೊಪ್ಪ ಕಾಪ್ಸ್ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜು ದ್ವಿತೀಯ, ಪುರುಷರಲ್ಲಿ ಗೋಣಿಕೊಪ್ಪ ಕಾಪ್ಸ್ ಪ್ರಥಮ, ಕುಶಾಲನಗರ ಎಂ.ಜಿ.ಎಂ ದ್ವಿತೀಯ ಸ್ಥಾನ ನಡೆಯಿತು.
ಉತ್ತಮ ವಿಭಾಗ
ಕ್ರಿಕೆಟ್ನಲ್ಲಿ ಪಂದ್ಯಪುರುಷ ಬಹುಮಾನವನ್ನು ಫೀ. ಮಾ. ಕಾರ್ಯಪ್ಪ ತಂಡದ ಸಂತೋಷ್, ಉತ್ತಮ ಬೌಲರ್ ಬಹುಮಾನವನ್ನು ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಮುನೀರ್, ಉತ್ತಮ ಕ್ಷೇತ್ರ ರಕ್ಷಕ ಬಹುಮಾನವನ್ನು ವೀರಾಜಪೇಟೆ ಕಾವೇರಿ ಕಾಲೇಜು ತಂಡದ ಸೋಮಣ್ಣ ಪಡೆದುಕೊಂಡರು.
ಥ್ರೋಬಾಲ್ನ ಉತ್ತಮ ಆಟಗಾರಳಾಗಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ಎಂ.ಕೆ. ಪದ್ಮ ಪಡೆದುಕೊಂಡರು.
ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್.ಆರ್. ಉಷಾಲತಾ ಉದ್ಘಾಟಿಸಿ ಮಾತನಾಡಿ, ಸಿಬ್ಬಂದಿಗಳಲ್ಲಿ ಒತ್ತಡ ನಿವಾರಣೆಗೆ ಕ್ರೀಡಾಕೂಟ ಆಯೋಜಿಸಲಾಗಿದೆ. ಕಾಲೇಜು ವ್ಯಾಪ್ತಿಯಲ್ಲಿ ಅನ್ಯೋನ್ಯತೆ ಹೆಚ್ಚಿಕೊಳ್ಳಲು ಇದರಿಂದ ಸಹಕಾರಿಯಾಗುತ್ತದೆ. ಕ್ರೀಡೆ ಮೂಲಕ ಶೈಕ್ಷಣಿಕವಾಗಿ ಒಂದಷ್ಟು ಪ್ರೋತ್ಸಾಹ ಸಿಗುವಂತಾಗಿದೆ ಎಂದರು.
ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ದಾನಿ ಟಿ.ಎಂ. ದೇವಯ್ಯ, ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಸಿ.ಎಂ. ದೇವಯ್ಯ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಬಹುಮಾನ ವಿತರಿಸಿದರು. ಕ್ರೀಡಾಕೂಟ ಸಂಚಾಲಕ ಪೆಮ್ಮಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಸಂತೋಷ್, ಉಪನ್ಯಾಸಕ ಚಿಟ್ಯಪ್ಪ ಉಪಸ್ಥಿತರಿದ್ದರು. ಅಜ್ಜಮಾಡ ಪೊನ್ನಪ್ಪ, ಚೆನ್ನನಾಯಕ ವೀಕ್ಷಕ ವಿವರಣೆ ನೀಡಿದರು. - ಸುದ್ದಿಪುತ್ರ