ಶನಿವಾರಸಂತೆ, ಫೆ. 7: ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಡಾ. ಉದಯಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚನ್ನರಾಯ ಪಟ್ಟಣದಿಂದ ಮಾಕುಟ್ಟದವರೆಗಿನ ರಾಷ್ಟ್ರೀಯ ಹೆದ್ದಾರಿ ಸಾಗುವ ಮಾಹಿತಿ ಬಗ್ಗೆ ಚರ್ಚೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಹೊಳೆನರಸಿಪುರ, ಅರಕಲಗೂಡು, ಕೊಡ್ಲಿಪೇಟೆ, ಶನಿವಾರಸಂತೆ ಮೂಲಕ ಹಾದು ಹೋಗಬೇಕಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆ ಪ್ರಕಾರ ಕೆಲವರ ಪಿತೂರಿಯಿಂದ ಕೊಡ್ಲಿಪೇಟೆಗೆ ಕಡಿತಗೊಳಿಸಿ ಮಲ್ಲಿಪಟ್ಟಣದಿಂದ ಶನಿವಾರಸಂತೆಗಾಗಿ ಸಾಗಲಿದೆ ಎಂಬ ಮಾಹಿತಿ ಹಿನ್ನೆಲೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸ ಲಾಯಿತು. ಇಲಾಖೆಗೆ ಸಂಬಂಧಪಟ್ಟ ಸಚಿವರುಗಳನ್ನು ಭೇಟಿಯಾಗಲು ನಿಯೋಗ ತೆರಳಿ ಮನವಿ ಸಲ್ಲಿಸುವದು, ಉಗ್ರ ಹೋರಾಟ ನಡೆಸುವದು, ಬಂದ್‍ಗೆ ಕರೆ ಕೊಡುವದು ಇತ್ಯಾದಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜ್, ಕಾಂಗ್ರೆಸ್ ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಔರಂಗಜೇಬ್, ಜೆ.ಡಿ.ಎಸ್. ಹೋಬಳಿ ಅಧ್ಯಕ್ಷ ಚಂದ್ರಶೇಖರ್, ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಯತೀಶ್‍ಕುಮಾರ್, ಬಿ.ಜೆ.ಪಿ. ಮುಖಂಡರಾದ ಭಗವಾನ್ ಗೌಡ, ಆಟೋ ಚಾಲಕರ ಸಂಘದ ಅಧ್ಯಕ್ಷ ಸೋಮಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜಯ್, ಮುಖಂಡರಾದ ಮಹಮ್ಮದ್ ಹನೀಫ್, ಕಾಂತರಾಜ್, ವಹಾಬ್, ಸುಬ್ರಮಣ್ಯ, ಪ್ರಕಾಶ್, ಕೆಂಚೇಶ್ವರ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.