ವೀರಾಜಪೇಟೆ, ಫೆ. 7: ಅಂಕಗಳಿಗಿಂತ ಕೌಶಲ್ಯವೇ ಮುಖ್ಯವಾಗಿದೆ ಎಂದು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯ ಡಾ. ಗಿರೀಶ್ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ರೆಡ್‍ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅಂಕಗಳಿಕೆಯೇ ಮುಖ್ಯವಾಗಿದೆ. ಅದರ ಜೊತೆಗೆ ವಿದ್ಯಾರ್ಥಿಗಳು ಕೌಶಲ್ಯ ಹಾಗೂ ಏಕಾಗ್ರತೆ ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಐಸಾಕ್ ರತ್ನಾಕರ್, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯವೇ ಹೆಚ್ಚು ಮಹತ್ವಪೂರ್ಣವಾಗಿದೆ. ಒಂದು ಭವ್ಯ ರಾಷ್ಟ್ರದ ನಿರ್ಮಾಣಕ್ಕೆ ಕೌಶಲ್ಯಪೂರಿತ ಯುವಜನತೆಯು ಅಡಿಪಾಯವಾಗಿದ್ದಾರೆ. ಕೌಶಲ್ಯದಿಂದ ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದರು.
ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಹೆಚ್.ಆರ್. ಅರ್ಜುನ್ ಸ್ವಾಗತಿಸಿ, ನಿರೂಪಿಸಿದರು. ಈ ಸಂದರ್ಭ ಕಾಲೇಜಿನ ರೆಡ್‍ಕ್ರಾಸ್ ಅಧಿಕಾರಿ ಎಂ.ಪಿ. ಸಂಕೇತ್ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿ.ಎನ್. ಶಾಂತಿಭೂಷಣ್ ಉಪಸ್ಥಿತರಿದ್ದರು.