ಮಡಿಕೇರಿ, ಫೆ.7 : ಸರ್ಕಾರಿ ವ್ಯವಸ್ಥೆಯೊಂದಿಗೆ ಸಂಘ, ಸಂಸ್ಥೆಗಳು ಕೂಡ ಕೈಜೋಡಿಸಿ ಸಾಮಾಜಿಕ ಕಳಕಳಿಯನ್ನು ಮೆರೆದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟಿರುವ ಮಡಿಕೇರಿ ನಗರಸಭಾ ಆಯುಕ್ತ ರಮೇಶ್ ನಗರದ ಸ್ವಚ್ಛತೆ ಕಾಪಾಡುವ ಶ್ರಮಿಕ ವರ್ಗದ ಸಮಸ್ಯೆಗಳಿಗೆ ಸ್ಪಂದಿಸಲು ನಗರಸಭೆ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರಸಭೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ವೆಟರ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಚ್ಛತಾ ಸಿಬ್ಬಂದಿಗಳು ನಗರದ ಸ್ವಚ್ಛತೆ ಕಾಪಾಡಲು ನಿರಂತರ ಶ್ರಮವಹಿಸುತ್ತಿದ್ದು, ಇವರ ಬಗ್ಗೆ ನಗರಸಭೆಗೆ ಅನುಕಂಪವಿದೆ. ಶ್ರಮಿಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಉಪವೈದ್ಯಾಧಿಕಾರಿ ಡಾ.ಹೆಚ್.ವಿ.ದೇವದಾಸ್, ಸ್ವಚ್ಛತಾ ಸಿಬ್ಬಂದಿಗಳು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಮತ್ತು ದುಶ್ಚಟಗಳಿಂದ ದೂರ ಉಳಿಯುವÀ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕೆ.ದಾಮೋದರ್ ಮಾತನಾಡಿ ಸ್ವಚ್ಛತಾ ಸಿಬ್ಬಂದಿಗಳ ಸ್ವಚ್ಛತಾ ಕಾರ್ಯ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯವೆಂದರು.
ಔಷಧಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್ ಮಾತನಾಡಿ, ಮಡಿಕೇರಿ ನಗರ ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಗಮನ ಸೆಳೆಯಲು ಸ್ವಚ್ಛತಾ ಕಾರ್ಮಿಕರ ಶ್ರಮವೂ ಮುಖ್ಯ ಕಾರಣವೆಂದರು.
ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕÀ ಹೆಚ್.ಎಲ್.ದಿವಾಕರ್ ಪ್ರಾಸ್ತಾವಿಕ ಮಾತನಾಡಿ, ಸಮಾಜದಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಲ್ಲದೇ ಹೋಗಿದ್ದರೆ ಯಾರೂ ಆರೋಗ್ಯದಿಂದಿರಲು ಸಾಧ್ಯವಿರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಸಿಂಗಾಪುರ ಪ್ರವಾಸದಲ್ಲಿ ಪಾಲ್ಗೊಂಡಿದ್ದ ಸ್ವಚ್ಛತಾ ಸಿಬ್ಬಂದಿ ರಾಮಣ್ಣ ಮಾತನಾಡಿ ಅಲ್ಲಿನ ವ್ಯವಸ್ಥೆಗಳಿಗೆ ಹೋಲಿಸಿದರೆ ನಗರದ ಸ್ಪಚ್ಛತಾ ಕಾರ್ಯದಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಾಗಿದೆ ಎಂದರು.
ದಾನಿಗಳಾದ ಗಾಳಿಬೀಡು ಟಿ.ಆರ್.ವಾಸುದೇವ್, ಮಡಿಕೇರಿ ಖಲೀಲ್, ದಸಂಸ ಸಂಚಾಲಕ ಎನ್.ವೀರಭದ್ರಯ್ಯ, ಸಂಘಟನಾ ಸಂಚಾಲಕ ಎ.ಪಿ.ದೀಪಕ್ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ನಗರಸಭೆಯ 56 ಸ್ಪಚ್ಛತಾ ಸಿಬ್ಬಂದಿಗಳಿಗೆ ಸ್ವೆಟರ್ ವಿತರಿಸಲಾಯಿತು.
ಇದೇ ಸಂದರ್ಭ ಸ್ವಚ್ಛತಾ ಸಿಬ್ಬಂದಿಗಳ ಪರವಾದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭಾ ಆಯುಕ್ತ ರಮೇಶ್ ಅವರಿಗೆ ಸಲ್ಲಿಸಲಾಯಿತು.