ಮಡಿಕೇರಿ, ಫೆ. 7: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮೋಡ ಕವಿದ ವಾತಾವರಣದಿಂದ ಅಲ್ಲಲ್ಲಿ ಹನಿಗಳು ಗೋಚರಿಸಿದರೂ, ಮಳೆ ಸುರಿಯಲಿಲ್ಲ. ಬದಲಾಗಿ ಕತ್ತಲೆಕಾಡು, ಜೇನುಕೊಲ್ಲಿ, ಚೇರಂಬಾಣೆ, ಉತ್ತರ ಕೊಡಗಿನ ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ, ಅಬ್ಬೂರುಕಟ್ಟೆ ವ್ಯಾಪ್ತಿಯಲ್ಲಿ ನೆಲ ಸ್ವಲ್ಪಮಟ್ಟಿಗೆ ಮಳೆಯಿಂದ ತೋಯ್ದಿದೆ.ಕೊಡಗು ಜಿಲ್ಲೆಯ ಅಲ್ಲಲ್ಲಿ ಎರಡು ದಿನಗಳಿಂದ ಮೋಡಕವಿದ ವಾತಾವರಣದಿಂದ ಮಳೆಯೊಂದಿಗೆ ಜನವಲಯದಲ್ಲಿ ಆತಂಕವೂ ಎದುರಾಗಿದೆ. ನಾಪೋಕ್ಲು, ಹೊದ್ದೂರು, ನೆಲಜಿ, ಸಿದ್ದಾಪುರ ಮೂರ್ನಾಡು, ಹಾಕತ್ತೂರು, ಚೆಯ್ಯಂಡಾಣೆ ಸೇರಿದಂತೆ ಹಲವೆಡೆ ಸಾಧಾರಣ ಮಳೆಯೊಂದಿಗೆ ಕೆಲವೆಡೆ ಒಂದು ಇಂಚು, ಅರ್ಧ ಇಂಚಿನಷ್ಟು ಮಳೆ ಆಗಿದೆ ಇಂದು ಸಂಜೆ ಕೂಡ ಅಲ್ಲಲ್ಲಿ ಮಳೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕಾಫಿ ಕುಯಿಲಿನ ಪರ್ವ ಕಾಲ ಹಲವಷ್ಟು ಮಂದಿ ಪರಿಶ್ರಮಪಟ್ಟು ತೋಟದಿಂದ ಕಾಫಿಯನ್ನು ಕುಯಿಲು ಮಾಡಿ ಕಣಕ್ಕೆ ಸಾಗಿಸಿದ್ದರೆ, ಬಹಳಷ್ಟು ಬೆಳೆಗಾರರ ಕಾಫಿ ಕುಯಿಲು ಪೂರ್ಣಗೊಂಡಿಲ್ಲ. ಕಾರ್ಮಿಕರ ಕೊರತೆ ಮತ್ತಿತರ ಕಾರಣಗಳಿಂದ ಕಾಫಿ ಹಣ್ಣು ಗಿಡದಲ್ಲೇ ಒಣಗುತ್ತಿರುವದು ಒಂದೆಡೆಯಾದರೆ, ಇನ್ನೂ ಕುಯಿಲು ಮಾಡದವರು ಈಗಿನ ವಾತಾವರಣದಿಂದ ಆತಂಕಗೊಳ್ಳುತ್ತಿರುವದು ಕಂಡುಬರುತ್ತಿದೆ. ಮತ್ತೊಂದೆಡೆ ಕಣದಲ್ಲಿ ಒಣಗಲು ಹಾಕಿರುವ ಕಾಫಿಯನ್ನು ಶೀಘ್ರಗತಿಯಲ್ಲಿ ಒಣಗಿಸಿ ಸಂಗ್ರಹ ಮಾಡಿಕೊಳ್ಳಲೂ ಹಲವು ತೊಂದರೆ ಎದುರುಗಾಗಿದೆ.ಈಗಾಗಲೇ ಕುಯಿಲು ಪೂರ್ಣಗೊಳಿಸಿರುವ ಕೆಲವು ಬೆಳೆಗಾರರು ನೀರನ ಲಭ್ಯತೆಯಂತೆ ತೋಟಗಳಿಗೆ ನೀರು ಹಾಯಿಸಲೂ ಮುಂದಾಗಿದ್ದಾರೆ. ನೀರು ಹಾಯಿಸುತ್ತಿರುವವರಿಗೆ ಮಳೆಯ ಸಿಂಚನವಾಗುತ್ತಿರುವದು ಆಶಾದಾಯಕವಾಗಿದ್ದು, ಸ್ವಲ್ಪ ಮಟ್ಟಿಗೆ ಹೆಚ್ಚು ಮಳೆ ಸುರಿದಲ್ಲಿ ಇವರ ಕೆಲಸ ಕಾರ್ಯಗಳು ಸುಲಲಿತವಾಗಲಿದೆ. ಆದರೆ ಅಲ್ಪ ಪ್ರಮಾಣದಲ್ಲಿ ಮಳೆಯ ಹನಿಯಾಗಿ ಮತ್ತೆ ಬಿಸಿಲಿನ ವಾತಾವರಣ ಎದುರಾದಲ್ಲಿ ಕಾಫಿ ಹೂ ಅರಳಲು ಸಮಸ್ಯೆಯಾಗಲಿದೆ. ಬೇರೆ ಬೇರೆ ವಿಭಾಗಗಳಲ್ಲಿ ವಿಭಿನ್ನ ರೀತಿಯ ಚಿತ್ರಣಗಳಿದ್ದು, ಕೆಲವರಿಗೆ ಸಂತಸ, ಇನ್ನು ಹಲವರಿಗೆ ಆತಂಕ ಮನೆ ಮಾಡಿದೆ. ಜಿಲ್ಲೆಯ ಆರ್ಥಿಕತೆಯ ಬೆನ್ನಲುಬಾದ ಕಾಫಿಯ ಪರಿಸ್ಥಿತಿ ಹೀಗಿದ್ದರೆ, ಕಳೆದ ಹಲವು ತಿಂಗಳುಗಳ ಹಿಂದೆ ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಿಂದ ನಲುಗಿರುವವರ ಬದುಕು ಇನ್ನೂ ಆತಂಕಕಾರಿಯಾಗಿದೆ. ಅತ್ತ ಮನೆ-ಆಸ್ತಿ-ಪಾಸ್ತಿ ಕಳೆದುಕೊಂಡವರಿಗೆ ಇನ್ನೂ ಧೈರ್ಯ ತಂದುಕೊಳ್ಳಲು ಸೂರಾಗಲಿ, ಸೂಕ್ತ ರೀತಿಯ ಪರಿಹಾರ ಮಾರ್ಗ ಸೂಚಿಯಾಗಲಿ ಲಭಿಸಿಲ್ಲ. ಈ ಬಗ್ಗೆ ಯಾವದೇ ತೀರ್ಮಾನ ಇನ್ನೂ ಅಂತಿಮಗೊಳ್ಳದೆ ಇವರೆಲ್ಲರ ಬದುಕೂ ಡೋಲಾಯಮಾನವಾಗಿದೆ. ಜಖಂಗೊಂಡಿರುವ ಮನೆಗಳು, ಅಪಾಯಕಾರಿಯಾಗಿರುವ ಪರಿಸ್ಥಿತಿ ಈಗಲೂ ಅದೇ ಕಠೋರತೆಯಲ್ಲೇ ಮುಂದುವರೆದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂಜೆ ಕೇಳಿ ಬಂದ ಗುಡುಗು ಜನತೆಯನ್ನು ಬೆಚ್ಚಿ ಬೀಳಿಸಿತು.

(ಮೊದಲ ಪುಟದಿಂದ) ಕಳೆದ ಹಲವಷ್ಟು ವರ್ಷಗಳಿಂದ ಪ್ರಾಕೃತಿಕ ಏರು ಪೇರಿನಿಂದ ಜನತೆ ನಿರಂತರ ಸಮಸ್ಯೆಗಳನ್ನೇ ಕಾಣುತ್ತಿದ್ದು ಎಲ್ಲವೂ ಸುಧಾರಣೆಯಾಗಲಿ ಎಂಬದು ಆಶಾಭಾವನೆಯಾಗಿದೆ.

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ವರ್ಷದ ಪ್ರಥಮ ಮಳೆಯ ಸಿಂಚನವಾಯಿತು. ಅಪರಾಹ್ನ 3 ಗಂಟೆ ಸುಮಾರಿಗೆ ಈ ವ್ಯಾಪ್ತಿಯಲ್ಲಿ ತುಂತುರು ಮಳೆಯಾಯಿತು.

ನಿನ್ನೆಯಿಂದ ಮೋಡ ಕವಿದ ವಾತಾವರಣವಿದ್ದು, ಇಂದು ಬೆಳಗ್ಗೆಯಿಂದ ಉರಿ ಬಿಸಿಲು ಕಂಡುಬಂತು. ಮಧ್ಯಾಹ್ನದ ನಂತರ ತಂಪಾದ ವಾತಾವರಣದೊಂದಿಗೆ ಮಳೆಹನಿಗಳ ಸಿಂಚನವಾಯಿತು.

ದಿಢೀರ್ ಸುರಿದ ಮಳೆಗೆ ಕೆಲಕಾಲ ಜನಜೀವನ ಅಸ್ತವ್ಯಸ್ಥಗೊಂಡಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಗೆ ತೆರಳಲು ಕೊಂಚ ಪರದಾಡಿದರು. ಕಾಫಿ ಬೇಳೆಯನ್ನು ಒಣಗಿಸಲು ಹಾಕಿದ್ದ ಬೆಳೆಗಾರರು ಮಳೆಯಿಂದ ಸಮಸ್ಯೆ ಎದುರಿಸಿದರು.

ನಾಪೋಕ್ಲು: ನಾಪೋಕ್ಲು ಪಟ್ಟಣದಲ್ಲಿ ಚುಮುಚುಮು ಚಳಿಯ ನಡುವೆ ದಟ್ಟಮಂಜು ಕವಿದು, ರವಿತೇಜನ ಆಗಮನ ಕೊಂಚ ವಿಳಂಬವಾಯಿತು. ಬೆಳಗ್ಗೆ ಹತ್ತು ಗಂಟೆಯವರೆವಿಗೂ ಎದುರುಗಡೆಯ ಯಾವ ವಸ್ತುವೂ ಗೋಚರಿಸದ ರೀತಿಯಲ್ಲಿ ದಟ್ಟನೆ ಮಂಜಿನಲ್ಲಿ ವಾಹನಗಳ ಸವಾರರು ಪರದಾಡುವಂತಾಯಿತು.

ಸಂಜೆ ಸುರಿದ ವರ್ಷದ ಮೊದಲ ಮಳೆ ಭುವಿಯನ್ನು ತಂಪಾಗಿಸುವದರೊಂದಿಗೆ ಗುರುವಾರ ಬೆಳಗ್ಗೆ ಹತ್ತು ಗಂಟೆವರೆಗೂ ದಟ್ಟಮಂಜು ಕವಿದ ಮಂಜಿನಿಂದಾಗಿ ಕಾಫಿ ಒಣಗಿಸಲು ಬೆಳೆಗಾರರು ತೊಂದರೆಪಡುವಂತಾಯಿತು.

ನಾಪೋಕ್ಲು : ಪಟ್ಟಣವ್ಯಾಪ್ತಿಯಲ್ಲಿ ಗುರುವಾರವೂ ಮಳೆ ಸುರಿಯಿತು.ಹೋಬಳಿ ವ್ಯಾಪ್ತಿಯಲ್ಲಿ ವಿವಿಧೆಡೆ ಬುಧವಾರ ಮಳೆಯಾಗಿದ್ದು ಒಂದೆಡೆ ಕಾಫಿ ಬೆಳೆಗಾರರು ಮೊದಲ ಹೂ ಮಳೆಯಿಂದ ಸಂತಸ ಪಟ್ಟರೆ ಮತ್ತೊಂದೆಡೆ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ತೋಯ್ದು ಹೋಗಿದ್ದು ಸಂಕಷ್ಟ ಅನುಭವಿಸಿದರು.

ಕಾಫಿ ಬೆಳೆಗಾರರು ಹೂ ಮಳೆಯ ನಿರೀಕ್ಷೆಯಲ್ಲಿದ್ದು, ದಿಢೀರಾಗಿ ಸುರಿದ ಸುಮಾರು 1 ಇಂಚು ಮಳೆ ಬೆಳೆಗಾರರಿಗೆ ಸಂತಸವನ್ನು ತಂದಿದೆ. ಕಾಫಿ ಕೊಯ್ಲು ಪೂರೈಸಿದ ತೋಟಗಳ ಮಾಲೀಕರು ಮೊದಲ ಹೂ ಮಳೆಯಿಂದ ಸಂತಸ ಅನುಭವಿಸಿದರೆ, ಹಲವು ಬೆಳೆಗಾರರು ತೊಂದರೆ ಅನುಭವಿಸಿದರು. ಕಾರ್ಮಿಕರ ಕೊರತೆಯಿಂದ ಹಲವೆಡೆ ಕಾಫಿ ಕೊಯ್ಲು ಆಗದೆ ಗಿಡಗಳಲ್ಲಿ ಉಳಿದಿದ್ದು ಮಳೆಯಿಂದಾಗಿ ಕಾಫಿ ಫಸಲು ಉದುರಿ ನಷ್ಟವಾಗಲಿದೆ ಎಂಬ ಆತಂಕ ಮೂಡಿದೆ.

ಕುಶಾಲನಗರ: ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಗುಡ್ಡೆಹೊಸೂರು, ಆನೆಕಾಡು, ಕೂಡಿಗೆ ವ್ಯಾಪ್ತಿಯಲ್ಲಿ ಕೂಡ ಮಳೆಯಾದ ಬಗ್ಗೆ ವರದಿಯಾಗಿದೆ.

ಸಿದ್ದಾಪುರ: ವರ್ಷದ ಪ್ರಥಮ ಮಳೆಯು ಸಿದ್ದಾಪುರದಲ್ಲಿ ಗುಡುಗು, ಮಿಂಚು ಸಹಿತ ಭೂ ಸ್ಪರ್ಶ ಮಾಡಿದೆ. ಏಕಾಏಕಿ ಸುರಿದ ಮಳೆಯು ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೀಡುಮಾಡಿದೆ.

ಸುಂಟಿಕೊಪ್ಪ: ಸುಂಟಿಕೊಪ್ಪ, ಹೊಸಕೋಟೆ ಕೊಡಗರಹಳ್ಳಿ ಕಂಬಿಬಾಣೆ ಉಪ್ಪುತೋಡು ಭಾಗಗಳಲ್ಲಿ ಪ್ರಥಮ ವರ್ಷಧಾರೆ ಸುರಿಯುವ ಮೂಲಕ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ಭಾರೀ ಮಳೆಯಿಂದ ಕಾಫಿ ಸೇರಿದಂತೆ ಇನ್ನಿತರ ಕೃಷಿಫಸಲು ನಷ್ಟ ಸಂಭವಿಸಿದ್ದು, ಈ ಭಾರೀ ಕೃಷಿಕರಿಗೆ ಕೃಷಿಯಿಂದ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದ್ದು, ಕೃಷಿಕರು ಈಗಾಗಲೇ ನಷ್ಟದ ನಡುವೆ ಮೂಗಿನತ್ತ ದೃಷ್ಟಿ ನೆಟ್ಟಿದ ಸಂದರ್ಭ ಪ್ರಥಮ ವರ್ಷಾಧಾರೆಯು ಉತ್ತಮವಾಗಿ ಕೆಲವು ಭಾಗಗಳಲ್ಲಿ ಸುರಿದು ಕೃಷಿಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕಂಬಿಬಾಣೆ 1.95 ಇಂಚು, ಉಪ್ಪುತೋಡು ಹಾಗೂ ಕೊಡಗರಳ್ಳಿ ಭಾಗಗಳಲ್ಲಿ 2. ಇಂಚು ಸುರಿದಿದ್ದರೆ ಸುಂಟಿಕೊಪ್ಪದಲ್ಲಿ ಮಳೆಯು ಸಿಂಚನಗೊಂಡು ಗುಡುಗು ಸಿಡಿಲಿನ ಆರ್ಭಟವಿತ್ತು.

*ಸಿದ್ದಾಪುರ: ವಾಲ್ನೂರು– ತ್ಯಾಗತ್ತೂರು ಮತ್ತು ಅಭ್ಯತ್‍ಮಂಗಲ ಗ್ರಾಮಕ್ಕೆ ಈ ವರ್ಷದ ಮೊದಲ ಮಳೆಯಾಗಿತು. ಸುಮಾರು ಒಂದೂವರೆ ಇಂಚಿಗಿಂತಲೂ ಹೆಚ್ಚಿನ ಮಳೆ ಬಿದ್ದಿದೆ.

ಭಾರಿ ಗಾಳಿ ಗುಡುಗು ಸಿಡಿಲಿನೊಂದಿಗೆ ಕೂಡಿದ ಅಲ್ಲಿಕಲ್ಲು ಮಳೆ ಸುರಿಯಿತು. ಸಿದ್ದಾಪುರ ಮಾರ್ಗ ವಿಪರೀತ ಮಳೆ, ಗಾಳಿಯಿಂದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಪರಿಣಾಮ ಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.