ವೀರಾಜಪೇಟೆ, ಫೆ. 7: ಕಳೆದ ಎರಡೂವರೆ ತಿಂಗಳ ಹಿಂದೆ ಕೊಡಗಿನಿಂದ ಕೇರಳಕ್ಕೆ ಒಣ ಹುಲ್ಲು ಸಾಗಾಟಕ್ಕೆ ನಿರ್ಬಂಧಿಸಿ ಕೊಡಗಿನ ಹಿಂದಿನ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅಲೋಕ್ ಆರಾಧ್ಯ ಅವರು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ.ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಕೊಡಗಿಗೆ ಸೀಮಿತಗೊಂಡಂತೆ ಒಣ ಹುಲ್ಲನ್ನು ಇಂದಿನಿಂದ ಕೇರಳ ರಾಜ್ಯಕ್ಕೆ ಮುಕ್ತವಾಗಿ ಸಾಗಿಸಲು ಅವಕಾಶವಾಗಿದೆ.ಕೃಷಿಕರಾದ ಕಾಕೋಟುಪರಂಬುವಿನ ಮಂಡೇಟಿರ ಅನಿಲ್ ಅಯ್ಯಪ್ಪ ಅವರು ರೈತರು, ಕೃಷಿಕರು ಹಾಗೂ ಒಣ ಹುಲ್ಲು ವ್ಯಾಪಾರಸ್ಥರ ಪರವಾಗಿ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಈಚೆಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿ ಪರ ಹರೀಶ್ ಗಣಪತಿ ಅವರು ವಕಾಲತ್ತು ವಹಿಸಿದ್ದರು.

ಕೊಡಗು ಜಿಲ್ಲಾಧಿಕಾರಿಯವರು ಕಳೆದ ತಾ 23-11-2018 ರಂದು ಕೇರಳಕ್ಕೆ ಒಣ ಹುಲ್ಲು ಸಾಗಾಟ ನಿರ್ಬಂಧಿಸಿ ಆದೇಶ ಹೊರಡಿಸಿದ ನಂತರ ರೈತರ, ಹುಲ್ಲು ವ್ಯಾಪಾರಿಗಳ ಪರವಾಗಿ ಜಿಲ್ಲಾಧಿಕಾರಿ, ಕೊಡಗು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿಯೂ ಯಾವದೇ ಪ್ರಯೋಜನ ಕಾಣದ್ದರಿಂದ ನ್ಯಾಯ ಕೋರಿ ಉಚ್ಚ ನ್ಯಾಯಾಲಯಕ್ಕೆ ಹೋಗಬೇಕಾಯಿತು ಎಂದು ತಿಳಿಸಿರುವ ಅನಿಲ್ ಅಯ್ಯಪ್ಪ ಅವರು ಇದರಿಂದಾಗಿ ಕೊಡಗಿನ ಕೃಷಿಕರಿಗೆ ಒಣ ಹುಲ್ಲಿಗೆ ನ್ಯಾಯ ಸಮ್ಮತವಾದ ಬೆಲೆ ದೊರೆಯಲಿದೆ ಎಂದರು.

ಅಂತರರಾಜ್ಯ ಒಣ ಹುಲ್ಲು ಸಾಗಾಟದ ನಿರ್ಬಂಧವನ್ನು ಕೆಲವು ರೈತ ಸಂಘಟನೆಗಳು ವಿರೋಧಿಸಿದ್ದವು.