ಮಡಿಕೇರಿ, ಫೆ. 7: ಕೇಂದ್ರ ಸರಕಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ದೀಪಾವಳಿಯ ಕೊಡುಗೆಯಾಗಿ ಕ್ರಮವಾಗಿ ರೂ. 1500 ಮತ್ತು ರೂ. 700 ಗೌರವ ಧನವನ್ನು ಹೆಚ್ಚಳವಾಗಿ ಘೋಷಿಸಿತ್ತು. ಆದರೆ ಈ ಭರವಸೆ ಇಲ್ಲಿಯವರೆಗೆ ಈಡೇರಿಲ್ಲ. ಈ ಭರವಸೆಯಲ್ಲಿ ಯಾವದೇ ಲಾಭವಿಲ್ಲ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಮುಖಂಡ ಟಿ.ಪಿ. ರಮೇಶ್ ಟೀಕಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ವೇತನ ದುಪ್ಪಟ್ಟು ಎನ್ನುವದಾದರೇ ಕಾರ್ಯಕರ್ತರಿಗೆ ರೂ. 3000 ಸಾವಿರ ಹಾಗೂ ಸಹಾಯಕಿಯರಿಗೆ ರೂ. 1,500 ಗೌರವ ಧನವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಲ್ಲಿ ದುಡಿಯುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವೇತನ ಹೆಚ್ಚಿಸಲು ಸರ್ಕಾರ ರೂ. 30 ಕೋಟಿ ಅನುದಾನವನ್ನು ಮೀಸಲಿಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಲಾಗಿದೆ. ಆದರೆ ಈ ಮನವಿಗೂ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಒಪ್ಪಿಗೆ ದೊರೆತ್ತಿಲ್ಲವೆಂದು ರಮೇಶ್ ಆರೋಪಿಸಿದ್ದಾರೆ.