ವೀರಾಜಪೇಟೆ, ಫೆ. 7: ವೀರಾಜಪೇಟೆಯ ಉದ್ಯಮಿ ಶಫೀಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀssಸರು ದರ್ಶನ್, ಜೀವನ್ ಹಾಗೂ ರೋಯಲ್ ಎಂಬ ಮೂವರನ್ನು ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಮೇರೆಗೆ ಎಲ್ಲರನ್ನು ಹದಿನೈದು ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಲಾಗಿದೆ.ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಡಾ. ಸುಮನ್ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಮುಸ್ಲೀಂ ಮುಖಂಡರುಗಳೊಂದಿಗೆ ಮಾತನಾಡಿ ರಕ್ಷಣೆಯ ಭರವಸೆ ನೀಡಿದರು.

ಶಫೀಕ್ ಕೊಲೆ ಆರೋಪದಲ್ಲಿ ಎರಡನೇ ಆರೋಪಿಯಾಗಿರುವ ರೌಡಿಶೀಟರ್ ಜೀವನ್ ಏಳು ವರ್ಷಗಳ ಹಿಂದೆಯೂ ಇಲ್ಲಿನ ಕೊಡವ ಸಮಾಜದ ಬಳಿಯಲ್ಲಿ ನಡೆದ ಕಾಳಪ್ಪ ಎಂಬುವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈತನನ್ನು ಜೈಲಿನಿಂದ ಬಿಡುಗಡೆಗೆ ಪರೋಕ್ಷವಾಗಿ ಆರ್ಥಿಕವಾಗಿ ಧನ ಸಹಾಯ ಮಾಡಿದವರನ್ನು ತನಿಖೆಗೊಳಪಡಿಸಲಾಗುವದು. ಅವರ ಮೇಲೂ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಹಿಂಜರಿಯುವದಿಲ್ಲ. ಇದಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ಕ್ರಿಮಿನಲ್ ಸೆಕ್ಷನ್‍ಗಳಿವೆ. ಈ ಸಂಬಂಧ ಕೂಲಂಕಷವಾಗಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಡಿವೈಎಸ್‍ಪಿ ನಾಗಪ್ಪ ಅವರಿಗೆ ಆದೇಶ ನೀಡಿದರು.

ಎಸ್‍ಪಿ ಭೇಟಿ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ, ಎಸ್.ಎಚ್. ಮತೀನ್, ಕಾಂಗ್ರೆಸ್ ಪಕ್ಷದ ಆರ್.ಕೆ. ಅಬ್ದುಲ್ ಸಲಾಂ, ಏಜಾಜ್ ಅಹಮ್ಮದ್ ಇನ್ನಿತರರು ರಕ್ಷಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು.

ಎಸ್‍ಪಿ ಭೇಟಿಯ ಸಂದರ್ಭ ಡಿ.ವೈಎಸ್.ಪಿ. ನಾಗಪ್ಪ, ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಇತರ ಪೊಲೀಸ್ ಸಿಬ್ಬಂದಿ ಹಾಜರಿದ್ದರು.