ಸೋಮವಾರಪೇಟೆ, ಫೆ. 7: ಹೊಯ್ಸಳರ ಕಾಲದಲ್ಲಿ ನಿರ್ಮಿಸಲ್ಪಟ್ಟಿರುವ ಸಮೀಪದ ಗೆಜ್ಜೆಹಣಕೋಡು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದ ಲೋಕಾರ್ಪಣೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ನೂರಾರು ಭಕ್ತರ ಸಮ್ಮುಖದಲ್ಲಿ ಇಂದು ವಿಧ್ಯುಕ್ತವಾಗಿ ನೆರವೇರಿತು.ಸುಮಾರು 40ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ದೇವಾಲಯವನ್ನು ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗಸ್ವಾಮೀಜಿ ಅವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ವಿವಿಧ ಮಠಾಧೀಶರುಗಳು ಉಪಸ್ಥಿತರಿದ್ದರು.ದೇವಾಲಯವನ್ನು ಲೋಕಾರ್ಪಣೆಗೊಳಿಸಿದ ನಂತರ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಸಿದ್ದಲಿಂಗಸ್ವಾಮೀಜಿ ಅವರು, ದೇವಾಲಯಗಳು ಧಾರ್ಮಿಕ ನಂಬಿಕೆಯ ಪ್ರತೀಕವಾಗಿದ್ದು, ಧರ್ಮದ ಆಚರಣೆ ಇಂದಿನ ಅಗತ್ಯತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಸಂಸ್ಕøತಿಯ ಪ್ರತೀಕವಾಗಿದ್ದು, ಮನುಷ್ಯನ ಅಂತರಂಗದ ಪ್ರತಿಬಿಂಬವಾಗಿದೆ. ವಿಜ್ಞಾನ ತಂತ್ರಜ್ಞಾನ ಮುಂದುವರೆದರೂ ಆಂತರಿಕವಾಗಿ ಆಧ್ಯಾತ್ಮದ ದಾರಿದ್ರ್ಯ ಕಾಡುತ್ತಿದೆ. ವಿಜ್ಞಾನದೊಂದಿಗೆ ಆಧ್ಯಾತ್ಮಿಕತೆಯಿದ್ದರೆ ಮಾತ್ರ ಸಮಾಜ ಉನ್ನತಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.
ಅರಕಲಗೂಡು ಸರ್ಪಭೂಷಣ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಎಲ್ಲಾ ಧರ್ಮಗಳ ತತ್ವವೂ ಒಂದೇ ಆಗಿದ್ದು, ಸತ್ಕಾರ್ಯಗಳಿಂದ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಧರ್ಮ ಕಾರ್ಯಗಳಿಂದ ಜೀವನಕ್ಕೆ ಮುಕ್ತಿ ದೊರೆಯುತ್ತದೆ ಎಂದರು.
ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಭಾರತ ಧರ್ಮದ
(ಮೊದಲ ಪುಟದಿಂದ) ತಳಹದಿಯ ಮೇಲೆ ನಿಂತಿದೆ. ಇಲ್ಲಿನ ಸಂಸ್ಕøತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಮಠಮಾನ್ಯಗಳು ಮಾನಸಿಕ ನೆಮ್ಮದಿಯ ತಾಣಗಳಾಗಿದ್ದು, ಅವುಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ವಿರಕ್ತ ಮಠಾಧೀಶರಾದ ಶ್ರೀ ವಿಶ್ವೇಶ್ವರಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ತೊರೆನೂರು ಮಠದ ಶ್ರೀ ಮಲ್ಲೇಶಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗಸ್ವಾಮೀಜಿ, ಗ್ರಾ.ಪಂ. ಅಧ್ಯಕ್ಷ ದಿವಾಕರ್, ಉದ್ಯಮಿ ನಾಪಂಡ ಮುತ್ತಪ್ಪ, ದೇವಾಲಯ ಸಮಿತಿ ಅಧ್ಯಕ್ಷ ವೇದಾಂತಯ್ಯ, ಯುವಕ ಸಂಘದ ಅಧ್ಯಕ್ಷ ಜಿ.ಆರ್. ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೇವಾಲಯದ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ ದಾನಿಗಳಾದ ಬೆಂಗಳೂರಿನ ಎ.ಎಂ.ನಾಗೇಶ್, ಕೂಗೇಕೋಡಿ ಗ್ರಾಮದ ಚಂದ್ರಶೇಖರ್, ಹಿರಿಗರ್ಜೆ ಜಿ.ಎಸ್.ಉಮೇಶ್, ತಟಳ್ಳಿ ಶಶಿಕಲ ಕಾಂತರಾಜ್, ಗೆಜ್ಜೆಹಣಕೋಡು ಗ್ರಾಮದ ವಾಗೀಶ್ ಧರ್ಮಪ್ಪ, ಉದ್ಯಮಿ ನಾಪಂಡ ಮುತ್ತಪ್ಪ ಸೇರದಂತೆ ಇತರರನ್ನು ಸನ್ಮಾನಿಸಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅವರು ಸಭಾ ಕಾರ್ಯಕ್ರಮ ನಿರ್ವಹಿಸಿದರು.
ಧಾರ್ಮಿಕ ಕೈಂಕರ್ಯ: ದೇವಾಲಯ ಲೋಕಾರ್ಪಣೆ ಅಂಗವಾಗಿ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಗಂಗಾಪೂಜೆ, ಮಂಗಳವಾದ್ಯ, ನೂತನ ಶಿಲಾಮೂರ್ತಿಗಳ ಗ್ರಾಮ ಪ್ರದಕ್ಷಿಣೆ, ಮಹಾ ಗಣಪತಿ ಪೂಜೆ, ವಾಸ್ತುಪೂಜೆ, ದ್ವಾರಪೂಜೆ, ಪುಣ್ಯಾಹ, ನಾಂದಿ, ಪಂಚಕಳಸ, ರಕ್ಷಾಬಂಧನ, ಅಂಕುರಾರೋಪಣ, ನವಗ್ರಹ, ಮೃತ್ಯುಂಜಯ, ಪಂಚ ಕಳಸ ಪೂಜೆಗಳು ನಡೆದವು.
ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಗಣಪತಿ ಪೂಜೆ, ನೂತನ ಪ್ರತಿಷ್ಠಾಪಿತ ವಿಗ್ರಹಗಳಿಗೆ ಪ್ರಾಣಪ್ರತಿಷ್ಠೆ, ರುದ್ರಾಭಿಷೇಕ, ಹೋಮ, ಮಹಾಪೂರ್ಣಾಹುತಿ, ರಕ್ಷಾಧಾರಣೆ, ಮಹಾಕುಂಭಾಭಿಷೇಕ, ಮಹಾಬಲಿ, ಅಷ್ಟೋತ್ತರ, ಮಹಾಮಂಗಳಾರತಿ ನಂತರ ನೂತನ ದೇವಾಲಯದ ಉದ್ಘಾಟನೆ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ತಾ. 8ರಂದು (ಇಂದು) ಪೂರ್ವಾಹ್ನ 9 ರಿಂದ 12 ಗಂಟೆಯವರೆಗೆ ನೂತನ ಪ್ರತಿಷ್ಠಾಪಿತ ಕನ್ನಂಬಾಡಿ ಅಮ್ಮನವರಿಗೆ ಉಡಿ ತುಂಬುವ ಕಾರ್ಯ ಜರುಗಲಿದ್ದು, ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವೇದಾಂತಯ್ಯ ತಿಳಿಸಿದ್ದಾರೆ.