ಮಡಿಕೇರಿ, ಫೆ. 7: ಈ ನಡುವೆ ಮುಂದಿನ ಎರಡು ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಪ್ರಕೃತಿ ವಿಕೋಪ ಸಂಬಂಧ ಈಗಾಗಲೇ ಕೈಗೊಳ್ಳಲಾಗಿರುವ ಮನೆ ಸೇರಿದಂತೆ ರಸ್ತೆ, ಸೇತುವೆ, ತಡೆಗೋಡೆ ಮತ್ತಿತರ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಸ್ಪಷ್ಟ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲೋಕೋಪ ಯೋಗಿ, ಪಂಚಾಯತ್ ರಾಜ್, ನಗರಾಭಿವೃದ್ಧಿ, ಸಣ್ಣ ನೀರಾವರಿ ಹೀಗೆ ನಾನಾ ಇಲಾಖೆಗಳ ಮೂಲಕ ಕೈಗೊಳ್ಳಲಾಗಿ ರುವ ಕಾಮಗಾರಿಗಳನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸು ವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ನಿರ್ದೇಶನ ನೀಡಿದರು.
ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮಾದಾಪುರ, ಮದೆ ಮತ್ತು ಕರ್ಣಂಗೇರಿಗಳಲ್ಲಿ ಮನೆ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಮನೆ ನಿರ್ಮಾಣ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ. ಮನೆ ನಿರ್ಮಾಣ ಸಂದರ್ಭದಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸೆಸ್ಕ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಂತ್ರಸ್ತರಿಗೆ ಮನೆ ಹಾಗೂ ಬೆಳೆ ಹಾನಿಯ ಪರಿಹಾರ ತಲಪಿದೆಯೇ ಎಂಬ ಬಗ್ಗೆ ಪರಿಶೀಲಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಖಾತೆಗೆ ಬಾರದ ಹಣ
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಂತ್ರಸ್ತರ ಖಾತೆಗೆ ಪರಿಹಾರದ ಮೊತ್ತ ಜಮೆಯಾಗಿಲ್ಲ ಎಂಬದು ಕೇಳಿ ಬಂದಿದೆ. ಆದ್ದರಿಂದ ಈ ಬಗ್ಗೆ ಬ್ಯಾಂಕ್‍ಗಳಿಂದ ಮಾಹಿತಿ ಪಡೆದು ಸಲ್ಲಿಸುವಂತೆ ಸೂಚಿಸಿದರು. ಅಧಿಕಾರಿ ಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಇನ್‍ಪೋಸಿಸ್ ಸಂಸ್ಥೆಯವರು ಸಹ 200 ಮನೆಗಳನ್ನು ನಿರ್ಮಿಸಲು ಮುಂದೆ ಬಂದಿದ್ದು, ಅವರಿಗೆ ಸೂಕ್ತ ಜಾಗವನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಪ್ರಕೃತಿ ವಿಕೋಪ ಹಾಗೂ ಇತರೆ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಸಕಾಲದಲ್ಲಿ ಖರ್ಚು ಮಾಡಬೇಕು. ಯಾವದೇ ಕಾರಣಕ್ಕೂ ಅನುದಾನ ವ್ಯರ್ಥವಾಗದಂತೆ ನೋಡಿ ಕೊಳ್ಳಬೇಕು. ಈ ಬಗ್ಗೆ ಗಮನಹರಿಸು ವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಡಿಕೇರಿ ನಗರದಲ್ಲಿ ಹಳೇ ಖಾಸಗಿ ಬಸ್ ನಿಲ್ದಾಣ ಹಾಗೂ ಜಿಲ್ಲಾಡಳಿತ ಭವನದ ಬಳಿ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನ್ಬುಕುಮಾರ್ ಅವರು ಸೂಚಿಸಿದರು.
ದಿಡ್ಡಳ್ಳಿಯಲ್ಲಿ ಗಿರಿಜನರಿಗಾಗಿ ಮನೆ ನಿರ್ಮಿಸಲಾಗಿದೆ. ಆದರೆ ಇದುವರೆಗೂ ಗಿರಿಜನರಿಗೆ ಮನೆಗಳನ್ನು ಏಕೆ ಹಸ್ತಾಂತರ ಮಾಡಿಲ್ಲ, ಎಂದು ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಾಮಗಾರಿ ಪೂರ್ಣಗೊಂಡಿರುವ ಮನೆಗಳನ್ನಾದರೂ ಹಸ್ತಾಂತರಿಸಿಲ್ಲ ವೇಕೆ ಎಂದು ಪ್ರಶ್ನಿಸಿದರು.
ಮುಂದಿನ ತಿಂಗಳು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರಲಿದೆ. ಜೊತೆಗೆ ಮಳೆ ಆರಂಭವಾ ಗಲಿದೆ. ಆದ್ದರಿಂದ ಕೂಡಲೇ ಮನೆ ಹಸ್ತಾಂತರ ಮಾಡುವಂತೆ ಅವರು ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸ ಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದವರಿಗೆ ಬಿಡುಗಡೆಯಾಗಿರುವ ಅನುದಾನವನ್ನು ಖರ್ಚು ಮಾಡಬೇಕು. ಸಮಾಜದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ವಿನಿಯೋಗಿಸುವಂತೆ ಅನ್ಬುಕುಮಾರ್ ಸೂಚನೆ ನೀಡಿದರು.
ವಿದ್ಯಾರ್ಥಿ ನಿಲಯ, ಸ್ಮಶಾನ, ರೈತ ಸಂಪರ್ಕ ಕೇಂದ್ರ ಮತ್ತಿತರ ನಿವೇಶನ ಸಂಬಂಧ ಸಭೆ ಆಹ್ವಾನಿಸಲಾಗುವದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಅಂಬೇಡ್ಕರ್ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಗಳಲ್ಲಿ ಸುಮಾರು 104 ಪಂಪ್‍ಸೆಟ್‍ಗಳಿಗೆ ಕಳೆದ ಎರಡು ವರ್ಷಗಳಿಂದ ಏಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಜಿಲ್ಲಾಧಿಕಾರಿ ಕಣ್ಮಣಿ ಜಾಯ್ ಪ್ರಶ್ನಿಸಿದರು.
600 ಕ್ವಿಂಟಾಲ್ ಭತ್ತ ಖರೀದಿ
ಭತ್ತ ಖರೀದಿ ಸಂಬಂಧಿಸಿದಂತೆ 632 ರೈತರು ನೋಂದಣಿ ಮಾಡಿದ್ದು, ಈಗಾಗಲೇ 600 ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಸದಾಶಿವಯ್ಯ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್ 3,916 ವಾಸದ ಮನೆ ಹಾನಿಗೆ ರೂ. 1,060 ಲಕ್ಷ ಪರಿಹಾರ ವಿತರಿಸಲಾಗಿದೆ. ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಡಿ ರೂ. 510 ಲಕ್ಷ ಬಿಡುಗಡೆ ಯಾಗಿದೆ. ಮನೆ ಕಳೆದುಕೊಂಡ ಅರ್ಹ ಸಂತ್ರಸ್ತರಿಗೆ ನವೆಂಬರ್ ಮಾಹೆಯಿಂದ ರೂ. 10 ಸಾವಿರ ಭತ್ಯೆ ನೀಡಲಾಗು ತ್ತಿದೆ. ಈ ಸಂಬಂಧ ರೂ. 48 ಲಕ್ಷ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.