ಕುಶಾಲನಗರ, ಫೆ. 7: ಕುಶಾಲನಗರ ಸಮೀಪ ಕಾವೇರಿ ನಿಸರ್ಗಧಾಮ ಹೊರಭಾಗದಲ್ಲಿರುವ ಖಾಸಗಿ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ಸಂಬಂಧ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಓರ್ವ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣ ನಡೆದಿದೆ. ಅಂಗಡಿ ಮಳಿಗೆಯ ಸಹಾಯಕ ಬೈಚನಹಳ್ಳಿಯ ಹರ್ಷದ್ ಎಂಬಾತ ಆಸ್ಪತ್ರೆಗೆ ದಾಖಲಾಗಿರುವ ಯುವಕ.
ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ ಆವರಣದಲ್ಲಿ ಅಂಗಡಿ ಮಳಿಗೆಯಲ್ಲಿ ಸಂಬಾರ ಪದಾರ್ಥಗಳ ಮಾರಾಟ ಸಂದರ್ಭ ಕಡಿಮೆ ದರದಲ್ಲಿ ಪ್ರವಾಸಿಗರಿಗೆ ಸಾಮಗ್ರಿಗಳನ್ನು ನೀಡಿದ ಬಗ್ಗೆ ನೆರೆಯ ಅಂಗಡಿಗೆ ಸೇರಿದ ಮೈಸಿ ಕತ್ತಣ್ಣಿರ ಎಂಬಾತ ಹರ್ಷದ್ ಎಂಬ ಯುವಕನಿಗೆ ಹಲ್ಲೆ ನಡೆಸಿ ತೀವ್ರ ರೀತಿಯಲ್ಲಿ ಥಳಿಸಿರುವದಾಗಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೈಸಿ ಮತ್ತು ಆತನೊಂದಿಗೆ 9 ಮಂದಿ ಸೇರಿ ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವದಾಗಿ ದೂರಿನಲ್ಲಿ ತಿಳಿಸಿರುವ ಹರ್ಷದ್, ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರವಾಸಿಗರು ಬಸ್ಸಿನಲ್ಲಿ ಆಗಮಿಸಿದ ಸಂದರ್ಭ ತನ್ನ ಅಂಗಡಿಯಲ್ಲಿ ಕಡಿಮೆ ದರಕ್ಕೆ ವಸ್ತುಗಳನ್ನು ಖರೀದಿ ಮಾಡಿದ ಸಂದರ್ಭ ತನ್ನ ಮೇಲೆ ಮೈಸಿ ಮತ್ತಿತರರು ಗುಂಪುಗೂಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವದಾಗಿ ಹರ್ಷದ್ ತಿಳಿಸಿದ್ದಾರೆ.
ತೀವ್ರ ತರಹ ಹಲ್ಲೆ ಮಾಡಿದ ಕಾರಣ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸ್ಥಳಾಂತರಿಸಲಾಗುವದು ಎಂದು ತಿಳಿಸಿರುವ ಗಾಯಾಳು ತಾಯಿ ಕೈರುನ್ನೀಸಾ ಇದೇ ರೀತಿ ಪ್ರವಾಸಿ ಕೇಂದ್ರದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಆಗಾಗ್ಯೆ ಘಟನೆಗಳು ನಡೆಯುತ್ತಿದ್ದು ಅಮಾಯಕರ ಮೇಲೆ ಗುಂಪುಗೂಡಿ ಹಲ್ಲೆ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸಿ ಮತ್ತು ಇತರರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ.