ವೀರಾಜಪೇಟೆ, ಫೆ. 6: ಸರ್ಕಾರ ಕೃಷಿಗೆ ಪ್ರೋತ್ಸಾಹ ನೀಡುತ್ತಿಲ್ಲ. ರೈತರು ಬೆಳೆದ ಭತ್ತಕ್ಕೆ ಬೆಂಬಲ ಬೆಲೆ ನೀಡುತ್ತಿಲ್ಲ. ಹುಲ್ಲಿಗೆ ಸರಿಯಾದ ಬೆಲೆ ಸಿಗದೆ ರೈತ ಸಂಕಷ್ಟದಲ್ಲಿದ್ದಾರೆ ಎಂದು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಮಾಚೇಟ್ಟಿರ ಚೋಟು ಕಾವೇರಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 26 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. ಈ ಬಾರಿಯ ಪ್ರಕೃತಿ ವಿಕೋಪದಿಂದ ರೈತ ಸಂಪೂರ್ಣ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಪಸ್ವಲ್ಪ ಬೆಳೆದ ಭತ್ತದ ಬೆಳೆಗೆ ಸರ್ಕಾರ ಬೆಂಬಲ ಬೆಲೆ ನೀಡುತ್ತಿಲ್ಲ. ಜಿಲ್ಲೆಯ ಯಾವ ಭಾಗದಲ್ಲಿಯೂ ಭತ್ತದ ಖರೀದಿ ಕೇಂದ್ರವನ್ನು ಸ್ಥಾಪಿಸಿಲ್ಲ. ಅತಿರ ಭತ್ತದ ಬೀಜವನ್ನು ಸರ್ಕಾರವೇ ರೈತರಿಗೆ ನೀಡಿದೆ. ಸರ್ಕಾರ ಭತ್ತವನ್ನು ಖರೀದಿಸುತ್ತಿಲ್ಲ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸಂಕಷ್ಟದಲ್ಲಿರುವ ರ್ಯೆತರಿಂದ ಭತ್ತವನ್ನು ಖರೀದಿಸುವಂತೆ ಆಗ್ರಹಿಸಿದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಮಾತನಾಡಿ, ರ್ಯೆತರು ಭತ್ತದ ನಷ್ಟವನ್ನು ಹುಲ್ಲು ಮಾರಿ ಸರಿದೂಗಿಸಿ ಕೊಳ್ಳುತ್ತಿದ್ದರು.

ಒಣ ಹುಲ್ಲವನ್ನು ಬೇರೆ ರಾಜ್ಯಕ್ಕೆ ಸಾಗಿಸಲು ಸರ್ಕಾರ ನಿರ್ಬಂಧಿಸಿದ್ದರಿಂದಲೂ ಹುಲ್ಲಿಗೆ ನ್ಯಾಯಸಮ್ಮತ ಬೆಲೆ ದೊರೆಯುವಲ್ಲಿ ರೈತರು ವಂಚಿತರಾಗಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸಂಘಟನೆಯ ತಾಲೂಕು ನಿರ್ದೇಶಕರಾದ ಹೆಚ್.ಡಿ ಶ್ರೀನಿವಾಸ್, ಮಾಚಪಂಡ ಕಿರಣ್ ಪೂಣಚ್ಚ, ಪಾಂಡಂಡ ರಚನ್ ಮೇದಪ್ಪ ಉಪಸ್ಥಿತರಿದ್ದರು.