ಮಡಿಕೇರಿ, ಫೆ. 8: ಹೌದು, ಕೊಡಗು ಪೊಲೀಸ್ ಇಲಾಖೆ ಅನೇಕ ಕಗ್ಗಂಟಾಗಿದ್ದ ಅಥವಾ ನಿಗೂಢ ಪ್ರಕರಣಗಳನ್ನು ಈತನಕವೂ ಭೇದಿಸುವ ಮೂಲಕ ಜನವಲಯದಲ್ಲಿ ಪ್ರಶಂಸೆಗಳಿಸಿದೆ. ಹೀಗಿದ್ದೂ ಇತ್ತೀಚಿನ ಬೆಳವಣಿಗೆಯಲ್ಲಿ ಏನೋ ತಳಮಳದೊಂದಿಗೆ ಜನತೆ ಪ್ರಶ್ನಾರ್ಹವೆಂಬಂತೆ ಇಲಾಖೆಯತ್ತ ನೋಡುವಂತಾಗಿದೆ.
ಅಂತಹ ಸಂಗತಿಗಳಲ್ಲಿ ಕಳೆದ ಆಗಸ್ಟ್‍ನಲ್ಲಿ ಎದುರಾಗಿದ್ದ ಪ್ರಾಕೃತಿಕ ದುರಂತದಲ್ಲಿ ಪ್ರವಾಹ ನಡುವೆ ಕೊಚ್ಚಿ ಹೋಗಿರುವ ಮದೆ ಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿನಿ ಮಂಜುಳ ಶವದ ಸುಳಿವು ಇದುವರೆಗೂ ಲಭಿಸಲೇ ಇಲ್ಲ. ಅಂತೆಯೇ ಹಾರಂಗಿ ಜಲಾನಯನ ಪ್ರದೇಶದ ಹರೀಶ್ ಕುಮಾರ್ ಎಂಬ ವ್ಯಕ್ತಿಯ ಸುಳಿವೂ ಸಿಗಲೇ ಇಲ್ಲ.ಈ ನಡುವೆ ಕುಶಾಲನಗರ ವೈದ್ಯ ಡಾ. ದಿಲೀಪ್ ಕುಮಾರ್ ಹತ್ಯೆ ಪ್ರಕರಣ ಹೇಗಾಯಿತು? ನೈಜ ಕೊಲೆ ಆರೋಪಿಗಳು ಯಾರು ಎಂಬಿತ್ಯಾದಿ ಸಂಶಯ ಜನತೆಯಲ್ಲಿದ್ದು, ಇದೊಂದು ಗಂಭೀರ ದುಷ್ಕøತ್ಯವನ್ನು ಇನ್ನು ಭೇದಿಸಲು ಸಾಧ್ಯವಾಗಿಲ್ಲ ಎಂಬ ಕೊರಗು ವೈದ್ಯ ಕುಟುಂಬವನ್ನು ಕಾಡತೊಡಗಿದೆ.
ಇನ್ನೊಂದೆಡೆ ಪೊಲೀಸ್ ಇಲಾಖೆಯಲ್ಲೇ ಸುದೀರ್ಘ ಸೇವೆಯೊಂದಿಗೆ, ನಿವೃತ್ತಿಗೊಂಡು ವಿಶ್ರಾಂತ ಜೀವನ ನಡೆಸುತ್ತಿದ್ದ ಸ್ಥಳೀಯ ನಿವಾಸಿ ಕೆ.ಎ. ನಂಜುಂಡ ಎಂಬ ವೃದ್ಧ ನಾಪತ್ತೆಯಾಗಿ ಎಂಟು ವಾರಗಳೇ ಕಳೆದರೂ ಆ ಬಗ್ಗೆ ಯಾವ ಸುಳಿವು ಸಿಗದಿರುವದು ಸಾಕಷ್ಟು ಅನುಮಾನಗಳಿಗೆ ಎಡೆಯಾಗಿದೆ.