ವೀರಾಜಪೇಟೆ, ಫೆ. 8: ವೀರಾಜಪೇಟೆ ತಾಲೂಕು ಕಚೇರಿಯ ಬಳಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನದ ಕಾಮಗಾರಿ 4 ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಯನ್ನು ವೀಕ್ಷಿಸಿದರೆ ಪೂರ್ಣಗೊಳ್ಳಲು ಇನ್ನು ಅಧಿಕ ಸಮಯ ಬೇಕಾಗಬಹುದು ತ್ವರಿತ ಗತಿಯಲ್ಲಿ ಕಾಮಗಾರಿ ಮುಗಿಸಲು ರಾಜ್ಯದ ಸಮಾಜ ಕಲ್ಯಾಣ ಖಾತೆ ಸಚಿವರಿಗೆ ದೂರು ನೀಡಿರುವದಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ವಿ.ಕೆ. ಸತೀಶ್‍ಕುಮಾರ್ ತಿಳಿಸಿದ್ದಾರೆ.
ಕಳೆದ 2012 ರಿಂದಲೇ ವೀರಾಜಪೇಟೆಯಲ್ಲಿ ಅಂಬೇಡ್ಕರ್ ಭವನದ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, 2015ರಲ್ಲಿ ನಿರ್ಮಿತಿ ಕೇಂದ್ರದವರು ಕಾಮಗಾರಿ ಆರಂಭಿಸಿದರು. ಕೇವಲ ಹದಿನೆಂಟು ತಿಂಗಳಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ ಇಲ್ಲಿಯ ತನಕ ಆಮೆ ನಡಿಗೆಯಲ್ಲಿ ನಡೆಯುತ್ತಿದೆ.
ಗುತ್ತಿಗೆದಾರರಾದ ನಿರ್ಮಿತಿ ಕೇಂದ್ರದವರು ಕಾಮಗಾರಿಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾಮಗಾರಿ ವಿಳಂಬಕ್ಕೆ ಕಾರಣರಾಗಿರುವ ಸಂಶಯ ಮೂಡಿದೆ. ಈ ಭವನದ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗುವ ಪ್ರಯತ್ನವಾಗ ಬೇಕಾಗಿದೆ ಎಂದು ಸತೀಶ್ ಒತ್ತಾಯಿಸಿದ್ದಾರೆ.