ಕುಶಾಲನಗರ, ಫೆ. 8: ರಾಜ್ಯ ಬಜೆಟ್‍ನಲ್ಲಿ ನೂತನ ತಾಲೂಕು ಘೋಷಣೆ ಸಂದರ್ಭ ಕುಶಾಲನಗರ ಕೇಂದ್ರವಾಗಿಸಿಕೊಂಡು ಕಾವೇರಿ ತಾಲೂಕು ರಚನೆ ಕೈಬಿಟ್ಟ ಸರಕಾರದ ನೀತಿಯನ್ನು ಖಂಡಿಸಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.

ಕಾವೇರಿ ತಾಲೂಕು ಹೋರಾಟ ಸಮಿತಿಯ ಸಂಚಾಲಕ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಕುಶಾಲನಗರದ ಮುಖ್ಯರಸ್ತೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು. ತಕ್ಷಣ ನೂತನ ತಾಲೂಕು ರಚನೆ ಬಗ್ಗೆ ಸರಕಾರ ಗಮನಹರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕೆಲಕಾಲ ಹೆದ್ದಾರಿ ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್, ಕುಶಾಲನಗರ ನೂತನ ತಾಲೂಕು ರಚನೆ ಹಿನೆÀ್ನಲೆಯಲ್ಲಿ ಸರಕಾರ ನಿರ್ಲಕ್ಷ್ಯ ತಾಳಿರುವದು ವಿಷಾದನೀಯ ಎಂದರಲ್ಲದೆ ಕಳೆದ ಎರಡು ದಶಕಗಳಿಂದ ತಾಲೂಕು ಬೇಡಿಕೆ ಹಿನೆÀ್ನಲೆಯಲ್ಲಿ ನಿರಂತರ ಹೋರಾಟ ನಡೆಯುತ್ತಿದ್ದರೂ ರಾಜ್ಯದಲ್ಲಿ ಅರ್ಹ ಮಾನದಂಡವಿಲ್ಲದ ಪಟ್ಟಣಗಳನ್ನು ತಾಲೂಕು ಮಾಡಿರುವದು ಕಂಡುಬರುತ್ತಿದೆ. ಯಾವದೇ ರೀತಿಯ ಬೆಲೆ ತೆತ್ತಾದರೂ ಹೋರಾಟದ ಮೂಲಕ ತಾಲೂಕು ಬೇಡಿಕೆ ಈಡೇರಿಸಲು ಬದ್ದ ಎಂದರು.

ಪ್ರತಿಭಟನೆಯಲ್ಲಿ ಸ್ಥಳೀಯ ಪಪಂ ಸದಸ್ಯರು, ಹೋರಾಟ ಸಮಿತಿಯ ವಿವಿಧ ಸ್ಥಾನೀಯ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು.