ಕುಶಾಲನಗರ, ಫೆ. 8: ಕುಶಾಲನಗರ ಪಟ್ಟಣದ ಕಲುಷಿತ ತ್ಯಾಜ್ಯ ಚರಂಡಿ ಮೂಲಕ ಹರಿದು ನೇರವಾಗಿ ನದಿ ಸೇರುವದನ್ನು ತಪ್ಪಿಸಲು ತ್ಯಾಜ್ಯ ನೀರು ಸಂಸ್ಕರಣೆ ಮಾಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಯೋಜನೆಯೊಂದನ್ನು ರೂಪಿಸಿದೆ. ಈ ಹಿನೆÀ್ನಲೆಯಲ್ಲಿ ಮೈಸೂರಿನ ಖಾಸಗಿ ಸಂಸ್ಥೆಯೊಂದು ಕುಶಾಲನಗರ ಪಟ್ಟಣದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕುಶಾಲನಗರ ಪಟ್ಟಣದ ಪ್ರಮುಖ 4 ಸ್ಥಳಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಿ ತ್ಯಾಜ್ಯ ನೀರು ಸಂಸ್ಕರಿಸಿ ವಿಲೇವಾರಿ ಮಾಡಲು ಟ್ರೀಟ್‍ಮೆಂಟ್ ಪ್ಲಾಂಟ್ ನಿರ್ಮಿಸಲು ಈ ಯೋಜನೆ ಕ್ರಮಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಂಸ್ಕರಣಾ ಘಟಕ ನಿರ್ಮಿಸುವ ಸಂಬಂಧ ಮೈಸೂರಿನ ಖಾಸಗಿ ಸಂಸ್ಥೆಯ ಪ್ರಮುಖರು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಅತಿ ಹೆಚ್ಚಿನ ಪ್ರಮಾಣದಲ್ಲಿ ಕಲುಷಿತ ತ್ಯಾಜ್ಯ ನದಿ ಸೇರುವ ಪ್ರದೇಶಗಳಾದ ದಂಡಿನಪೇಟೆ, ಮಾರುಕಟ್ಟೆ ಪ್ರದೇಶ, ಕನ್ನಡ ಭಾರತಿ ಮತ್ತು ಎಂಜಿಎಂ ವಿದ್ಯಾಸಂಸ್ಥೆಗಳ ಬಳಿ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಅಂದಾಜು 6 ಲಕ್ಷ ವೆಚ್ಚದಲ್ಲಿ ಈ ಪ್ರದೇಶಗಳಲ್ಲಿ ಟ್ರೀಟ್‍ಮೆಂಟ್ ಪ್ಲಾಂಟ್ ನಿರ್ಮಿಸಲು ಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ. ಕುಶಾಲನಗರ ಪಟ್ಟಣದಲ್ಲಿ ಕಲುಷಿತ ತ್ಯಾಜ್ಯ ನೇರವಾಗಿ ನದಿಗೆ ಸೇರಿ ನದಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಇತ್ತೀಚೆಗೆ ಪ.ಪಂ.ಗೆ ದೂರು ನೀಡಿದ್ದು ಕ್ರಮಕೈಗೊಳ್ಳದಿದ್ದಲ್ಲಿ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿತ್ತು. ಈ ಹಿನೆÀ್ನಲೆಯಲ್ಲಿ ತಕ್ಷಣ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಯೋಜನೆ ರೂಪಿಸಲು ಮುಂದಾಗಿದ್ದಾರೆ.

ಮೈಸೂರಿನ ಶಿವಸಾಯಿ ಸಂಸ್ಥೆಯ ಮುಖ್ಯಸ್ಥರಾದ ಉಮಾಶಂಕರ್, ಅನಿತಾ, ಪ.ಪಂ. ಸದಸ್ಯ ಅಮೃತ್‍ರಾಜ್, ಮುಖ್ಯಾಧಿಕಾರಿ ಸುಜಯ್‍ಕುಮಾರ್, ಅಭಿಯಂತರರಾದ ಶ್ರೀದೇವಿ, ಆರೋಗ್ಯ ನಿರೀಕ್ಷಕ ಉದಯ್ ಸ್ಥಳ ಪರಿಶೀಲನೆ ನಡೆಸಿದರು.