ಬೆಂಗಳೂರು, ಫೆ. 8: ರಾಜಕೀಯ ಏರಿಳಿತ, ಎಡರು-ತೊಡರುಗಳ ನಡುವೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಎರಡನೇ ಬಜೆಟ್ ಮಂಡನೆಯಾಗಿದೆ. ಹಣಕಾಸು ಖಾತೆಯನ್ನು ಹೊಂದಿರುವ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಎರಡನೇ ಬಜೆಟ್ ಮಂಡನೆ ಮಾಡಿದ್ದಾರೆ. ರೈತರು, ಉದ್ಯಮ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್ನಲ್ಲಿ ಹಲವು ಯೋಜನೆಗಳೊಂದಿಗೆ ಆದ್ಯತೆ ನೀಡಲಾಗಿದೆ.ರೈತ ಸಿರಿ: ಬಜೆಟ್ನಲ್ಲಿ ರೈತರಿಗೆ ಆದ್ಯತೆ ನೀಡಲಾಗಿದೆ. ಸಿರಿಧಾನ್ಯಗಳ ವಿಸ್ತೀರ್ಣ ಹೆಚ್ಚಿಸುವ ಸಲುವಾಗಿ ‘ರೈತಸಿರಿ’ ಹೆಸರಿನ ನೂತನ ಯೋಜನೆ ಯನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದಕ್ಕಾಗಿ 10 ಕೋಟಿ ರೂಪಾಯಿ ಮೀಸಲಿರಿಸಿರುವದಾಗಿ ತಿಳಿಸಿದ್ದಾರೆ.ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ, ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನಿರಾವರಿ ಕಾರ್ಯಕ್ರಮಗಳಿಗೆ ಒಟ್ಟು 472 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಎಲ್ಲಾ ವರ್ಗದ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಶೇ. 90 ರಷ್ಟು ಪ್ರೋತ್ಸಾಹ ಧನ ವಿತರಿಸಲು ಸರಕಾರ ನಿರ್ಧರಿಸಿದ್ದು, 368 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಕೃಷಿ ಹೊಂಡ ನಿರ್ಮಾಣಕ್ಕೆ 250 ಕೋಟಿ, ಬರಪೀಡಿತ ಮತ್ತು ಅತಿಹೆಚ್ಚು ಅಂತರ್ಜಾಲ ಕುಸಿತವಿರುವ 100 ತಾಲೂಕುಗಳಲ್ಲಿ ಬರ ನಿರೋಧಕ ಜಲಾನಯನ ಚಟುವಟಿಕೆಗಳ ಅನುಷ್ಠಾನಕ್ಕೆ 100 ಕೋಟಿ ರೂ. ಘೋಷಣೆಯಾಗಿದೆ.
500 ಸಂಯುಕ್ತ ಸಹಕಾರ ಸಂಘ ಸ್ಥಾಪನೆಗೆ 5 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿರುವ ಸಿಎಂ ಗೃಹಲಕ್ಷ್ಮಿ ಬೆಳೆ ಸಾಲ ಯೋಜನೆ ಜಾರಿಗೊಳಿಸಿದ್ದಾರೆ. ರೈತ ಮಹಿಳೆಯರ ಚಿನ್ನದ ಮೇಲೆ ಶೇ. 3 ರಷ್ಟು ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧರಿಸಿದ್ದಾರೆ. ಈರುಳ್ಳಿ, ಆಲೂಗಡ್ಡೆ ಸೇರಿದಂತೆ 12 ಬೆಳೆಗಳಿಗೆ ಪ್ರೋತ್ಸಾಹ ಧನ ನೀಡುವ ರೈತ ಕೃಷಿ ಕಣಜ ಯೋಜನೆಗಾಗಿ 510 ಕೋಟಿ ರೂ. ಮೀಸಲಿಡಲಾಗಿದೆ.
ಧಾರವಾಡದಲ್ಲಿ ಮಾವು ಉತ್ಪಾದಕಾ ಘಟಕ ಸ್ಥಾಪನೆ ಹಾಗೂ ಕೋಲಾರದಲ್ಲಿ ಟೊಮಾಟೋ ಉತ್ಪಾದನಾ ಘಟಕ ಸ್ಥಾಪನೆ, ಜೇನು ಕೃಷಿ ಉತ್ತೇಜನಕ್ಕೆ 5 ಕೋಟಿ ಮತ್ತು ಮಿಡಿ ಸೌತೆ ಬೆಳೆಯಲು ಉತ್ತೇಜನ ನೀಡುವ ಸಲುವಾಗಿ 6 ಕೋಟಿ ರೂ. ಅನುದಾನ ನಿಗದಿಪಡಿಸಲಾಗುವದು.
ತೆರಿಗೆದಾರರ ಹಣ ಪೋಲಾಗದಂತೆ ರೈತರ ಸಾಲಮನ್ನಾ ಮಾಡಲಾಗಿದೆ. 12 ಲಕ್ಷ ಖಾತೆಗೆ 5 ಸಾವಿರದ 400 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ 156 ತಾಲೂಕುಗಳು ಬರ ಪರಿಸ್ಥಿತಿ ಬಂದಿದೆ. ಬರ ಪರಿಸ್ಥಿತಿ ನಿರ್ವಹಿಸಲು ಸರಕಾರ ಸಮರ್ಥ ವಾಗಿದ್ದು, ರೈತರಿಗೆ ಪ್ರತಿ ಹೆಕ್ಟೇರ್ಗೆ 7,500 ರೂಪಾಯಿ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ.
ಇಂದು ಮಂಡಿಸಿರುವ ಮುಂಗಡ ಪತ್ರದಲ್ಲಿ ರಾಜ್ಯದಲ್ಲಿ ನಾಲ್ಕು ಹೊಸ ತಾಲೂಕುಗಳನ್ನು ಘೋಷಿಸಲಾಗಿದೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಗರಗಳನ್ನು ಹೊಸ ತಾಲೂಕುಗಳಾಗಿ ಘೋಷಿಸಲಾಗಿದೆ. ಇವುಗಳನ್ನು ತಾಲೂಕುಗಳಾಗಿ ಘೋಷಿಸ ಬೇಕೆಂಬದು ಹಲವು ದಿನಗಳ ಬೇಡಿಕೆಯಾಗಿತ್ತು.
ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
(ಮೊದಲ ಪುಟದಿಂದ) ಇವರುಗಳನ್ನು ಹೊಸ ತಾಲೂಕುಗಳನ್ನು ಘೋಷಿಸಲಾಗಿದ್ದು, ಅಲ್ಲಿನ ಸ್ಥಳೀಯರ ಬಹುದಿನ ಬೇಡಿಕೆ ಈಡೇರಿದಂತಾಗಿದೆ.
ಮೀನುಗಾರಿಕೆ: ಮೀನುಗಾರಿಕೆಗೂ ಆದ್ಯತೆ ನೀಡಲಾಗಿದ್ದು, ಮೀನುಗಾರರಿಗಾಗಿ ‘ರೈತ ಕಣಜ’ ಯೋಜನೆ ಘೋಷಣೆ ಮಾಡಲಾಗಿದೆ. ಅಂತೆಯೇ ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಡಿ.ಎ.ಟಿ. ಉಪಕರಣ ಅಳವಡಿಸಿಕೊಳ್ಳಲು ಶೇ. 50 ರಷ್ಟು ಸಹಾಯಧನ ಮತ್ತು 3 ಕೋಟಿ ರೂ. ಅನುದಾನ, ಒಳನಾಡು ಮತ್ತು ಹಿನ್ನೀರು ಜಲ ಸಂಪನ್ಮೂಲದಲ್ಲಿ ಸಿಗಡಿ ಮತ್ತು ಮೀನು ಕೃಷಿಗೆ ಪ್ರೋತ್ಸಾಹ ನೀಡಲಾಗುವದು ಎಂದು ಕುಮಾರಸ್ವಾಮಿ ಹೇಳಿದರು. ಅಂತೆಯೇ 400 ಘಟಕಗಳಿಗೆ ಸಹಾಯಧನ ನೀಡಲು 2 ಕೋಟಿ ರೂ. ಅನುದಾನವನ್ನೂ ಮೀಸಲಿಡುವದಾಗಿ ಸಿಎಂ ಹೇಳಿದರು.
ಸಾಲಮನ್ನಾ ಯೋಜನೆಗೆ 12,650 ಕೋಟಿ
ನಿರೀಕ್ಷೆಯಂತೆಯೇ ಸಾಲಮನ್ನಾ ಯೋಜನೆಗಾಗಿ ಬಜೆಟ್ನಲ್ಲಿ ಕುಮಾರಸ್ವಾಮಿ ಅವರು ಅನುದಾನ ಮೀಸಲಿಟ್ಟಿದ್ದಾರೆ. ಸಹಕಾರ ಬ್ಯಾಂಕುಗಳಿಲ್ಲಿನ ಸಾಲಮನ್ನಾಕ್ಕೆ ಈ ಆರ್ಥಿಕ ವರ್ಷದಲ್ಲಿ (2019-20) 6150 ಕೋಟಿ ಹಣ ಮೀಸಲಿಡಲಾಗಿದೆ. ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಪ್ರಕ್ರಿಯೆ ಇದೇ ವರ್ಷ ಜೂನ್ನಲ್ಲಿ ಮುಗಿಯಲಿದೆ ಎಂದು ಕುಮಾರಸ್ವಾಮಿ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಖಾಸಗಿ ಬ್ಯಾಂಕುಗಳಲ್ಲಿನ ಕೃಷಿ ಸಾಲಮನ್ನಾಕ್ಕೂ ಹಣ ಮೀಸಲಿಡಲಾಗಿದ್ದು, ಈ ಆರ್ಥಿಕ ವರ್ಷದಲ್ಲಿ 6500 ಕೋಟಿ ಹಣವನ್ನು ಖಾಸಗಿ ಬ್ಯಾಂಕಿನ ಕೃಷಿ ಸಾಲಮನ್ನಾಕ್ಕಾಗಿ ಮೀಸಲಿಡಲಾಗಿದೆ. ಖಾಸಗಿ ಬ್ಯಾಂಕಿನಲ್ಲಿನ ಕೃಷಿ ಸಾಲಮನ್ನಾ ಪ್ರಕ್ರಿಯೆಯು 2019-20ಕ್ಕೆ ಮುಗಿಯುತ್ತದೆ ಎಂದು ಕುಮಾರಸ್ವಾಮಿ ಬಜೆಟ್ನಲ್ಲಿ ಹೇಳಿದ್ದಾರೆ. ಅಲ್ಲಿಗೆ ಈ ಆರ್ಥಿಕ ವರ್ಷದಲ್ಲಿ ಕುಮಾರಸ್ವಾಮಿ ಅವರು ರೈತರ ಬೆಳೆ ಸಾಲಕ್ಕಾಗಿ 12650 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದಂತಾಗಿದೆ. ಕಳೆದ ವರ್ಷ 10500 ಕೋಟಿ ಹಣವನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಅಲ್ಲಿಗೆ ಎರಡು ವರ್ಷದಲ್ಲಿ ಸಾಲಮನ್ನಾಕ್ಕಾಗಿ ಒಟ್ಟು 23,150 ಕೋಟಿ ಹಣವನ್ನು ಸಾಲಮನ್ನಾಕ್ಕಾಗಿ ನೀಡಲಾಗಿದೆ.
ಅಲ್ಪಸಂಖ್ಯಾತರಿಗೆ ಭರ್ಜರಿ ಬಳುವಳಿ
ಹಿಂದುಳಿದ ವರ್ಗಗಳನ್ನು ಸಂತೃಪ್ತಿಪಡಿಸಲು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನವನ್ನು ಮೀಸಲಿಟ್ಟಿದ್ದಾರೆ. ಮಠ ಮಾನ್ಯಗಳಿಗೆಂದೇ 60 ಕೋಟಿ ರೂಪಾಯಿ ಅನುದಾನ ನೀಡಿದ್ದು, ಎಲ್ಲ ಸಮುದಾಯದ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ನೀಡಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿ ಸ್ಥಾಪಿಸಿದ ಸಿದ್ದಗಂಗಾ ಮಠಕ್ಕೆ ಕೂಡ ಭರ್ಜರಿ ಅನುದಾನ ನೀಡಲಾಗಿದೆ.
ವರ್ಗಗಳ ಜೊತೆಗೆ ಸಹಜವಾಗಿ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಕ್ಕೂ ಬಜೆಟ್ಟಿನಲ್ಲಿ ಒಂದಿಷ್ಟು ಹಣವನ್ನು ಮೀಸಲಿಟ್ಟಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಆಧುನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ ಒಂದಾವರ್ತಿಯಾಗಿ 25 ಕೋಟಿ ರುಪಾಯಿ ಅನುದಾನ. ದಾವಣಗೆರೆ, ತುಮಕೂರು, ಗದಗ, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹೊಸದಾಗಿ 5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ಪ್ರಾರಂಭಿಸಲು 20 ಕೋಟಿ ರೂಪಾಯಿ ಅನುದಾನ.
ರಾಜ್ಯದಲ್ಲಿನ ಮುಸ್ಲಿಂ ಕಬರಸ್ಥಾನಗಳಲ್ಲಿ (ರುದ್ರ ಭೂಮಿಗಳಲ್ಲಿ) ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ. ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು 400 ಕೋಟಿ ರೂಪಾಯಿ ಅನುದಾನ.
ಪ್ರವಾಸಿ ತಾಣಗಳ ಅಭಿವೃದ್ಧಿ
ಖಾಸಗಿ ಸಹಭಾಗಿತ್ವದಲ್ಲಿ ಒಂದು ಪ್ರವಾಸೋದ್ಯಮ ವಿಶ್ವವಿದ್ಯಾನಿಲ ಯವನ್ನು ಐತಿಹಾಸಿಕ ಸ್ಥಳವಾದ ಹಂಪಿಯಲ್ಲಿ ಕಳೆದ ಬಜೆಟ್ನಲ್ಲಿ ಘೋಷಿಸಿದ 3 ಕೋಟಿ ರೂ. ಅನುದಾನ ಮುಂದುವರಿಕೆ.
ಪ್ರವಾಸಿಗರನ್ನು ಆಕರ್ಷಿಸಲು ‘ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ ಆಯೋಜನೆಗೆ 2 ಕೋಟಿ ರೂ. ಅನುದಾನ ನೀಡಲಾಗಿದೆ. ರಾಮನಗರದ ಬಳಿ ಆಟ್ರ್ಸ್ ಅಂಡ್ ಕ್ರಾಫ್ಟ್ ವಿಲೇಜ್ ಮತ್ತು ಕಣ್ವ ಜಲಾಶಯದ ಪ್ರದೇಶದಲ್ಲಿ ಚಿಲ್ಡ್ರನ್ಸ್ ವಲ್ರ್ಡ್ ಯೋಜನೆ ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಪಡಿಸಲಾಗುವದು. ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ. ಈ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರದ ಶುದ್ಧತೆಯನ್ನು ಕಾಪಾಡಲು ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ 20 ಕೋಟಿ ರೂ. ಅನುದಾನ.
ಅರಣ್ಯ, ಜೀವಿಶಾಸ್ತ್ರ: ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕಾಗಿ ‘ಉಪಯೋಗಿಸಿದ ರೈಲುಹಳಿ ತಡೆಗೋಡೆಯಿಂದ ಮಾನವ-ಆನೆ ಸಂಘರ್ಷ ನಿಯಂತ್ರಣ’ ಯೋಜನೆಯಡಿ ರೈಲು ಹಳಿ ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ.
ಲಂಟಾನ ಮತ್ತು ಯುಪಟೋರಿಯಂ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಿ ಅರಣ್ಯಕ್ಕೆ ಪೂರಕವಾದ ಹುಲ್ಲು ಬೆಳೆಯಲು ಅನುವು ಮಾಡಿಕೊಡಲು 5 ಕೋಟಿ ರೂ. ಅನುದಾನ. ನಗರ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಸ್ಥಾಪಿಸಲು 15 ಕೋಟಿ ರೂ. ಅನುದಾನ.
ರಾಜ್ಯದ 17 ಕಲುಷಿತ ನದಿತೀರಗಳಲ್ಲಿ ಹಾಗೂ ಬೆಳ್ಳಂದೂರು ಕೆರೆ, ಅಗರ ಕೆರೆ ಮತ್ತು ವರ್ತೂರು ಕೆರೆಗಳಲ್ಲಿ ನಿರಂತರ ಪರಿವೇಷ್ಪಕ ಜಲಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಗೆ 9 ಕೋಟಿ ರೂ. ಅನುದಾನ.
ಜಿಲ್ಲಾ ಪಂಚಾಯಿತಿ: ಪ್ರತಿ ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ಅಭಿವೃದ್ಧಿ ಅನುದಾನ ಗರಿಷ್ಠ 8 ಕೋಟಿ ರೂ.ಗಳಿಗೆ ಹೆಚ್ಚಳ. ಇದಕ್ಕಾಗಿ 172 ಕೋಟಿ ರೂ.ಗಳ ಅನುದಾನ. ಪ್ರತಿ ತಾಲೂಕು ಪಂಚಾಯಿತಿ ಅನಿರ್ಬಂಧಿತ ಅಭಿವೃದ್ಧಿ ಅನುದಾನ ಗರಿಷ್ಠ 2 ಕೋಟಿ ರೂ.ಗಳವರೆಗೆ ಹೆಚ್ಚಳ. ಇದಕ್ಕಾಗಿ 372 ಕೋಟಿ ರೂ. ಅನುದಾನ.
ಯೋಜನೆ ಮತ್ತು ಪ್ರದೇಶಾಭಿವೃದ್ಧಿ
ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ವರ್ಷ 1,500 ಕೋಟಿ ರೂ. ಅನುದಾನ ಹಾಗೂ ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ 70 ಕೋಟಿ ರೂ., ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರಕ್ಕೆ 95 ಕೋಟಿ ರೂ. ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಕೋಟಿ ರೂ. ಅನುದಾನದಲ್ಲಿ ಕ್ರಿಯಾ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕ್ರಮ.
ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗಾಗಿ 600 ಕೋಟಿ ರೂ. ಅನುದಾನ. ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳನ್ವಯ ಅತೀ ಹಿಂದುಳಿದ ಹಾಗೂ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ 3010 ಕೋಟಿ ರೂ. ಅನುದಾನ.
ಕನ್ನಡ ಮತ್ತು ಸಂಸ್ಕøತಿ
ಶ್ರೀ ಶವಿಕುಮಾರ ಸ್ವಾಮೀಜಿಗಳ ಹುಟ್ಟೂರು ರಾಮನಗರ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕøತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.ಗಳ ವಿಶೇಷ ಅನುದಾನ.
ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.ಗಳ ಅನುದಾನ. ರಾಜ್ಯದ ಜಾನಪದ ಕಲಾವಿದರು ಹಾಗೂ ಕಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ‘ಜಾನಪದ ಜಾತ್ರೆ’ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲಾಗುವದು. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಏರ್ಪಡಿಸಲು 2 ಕೋಟಿ ರೂ. ಅನುದಾನ ಒದಗಿಸಲಾಗುವದು.
ಹಿಂದುಳಿದ ವರ್ಗಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ರೂ. 134 ಕೋಟಿ ಅನುದಾನ. ಈ ಸಮುದಾಯಗಳಿಗೆ ಮೀಸಲಿಟ್ಟಿರುವ ಅನುದಾನವು ನೇರವಾಗಿ ಅವರಿಗೆ ಸೇರುವಂತೆ ಮಾಡಲು ಒಬ್ಬ ನೋಡಲ್ ಅಧಿಕಾರಿ ಹಾಗೂ 4 ಅಧಿಕಾರೇತರ ಸದಸ್ಯರನ್ನೊಳಗೊಂಡ ಕಾರ್ಯಾಚರಣೆ ಪಡೆ ಸ್ಥಾಪನೆ ಮಾಡುವದಾಗಿ ಕುಮಾರಸ್ವಾಮಿ ಹೇಳಿದರು.
ಅರೆಭಾಷೆ ಒಕ್ಕಲಿಗ ಹಾಗೂ ಕೊಡವ ಸಮುದಾಯಗಳ ಸೂಕ್ಷ್ಮ ಸಮುದಾಯಗಳಾಗಿದ್ದು, ಅವರುಗಳಿಗೆ ಆದ್ಯತೆ ನೀಡುವದರೊಂದಿಗೆ ಅಭಿವೃದ್ಧಿಪಡಿಸುವದು ನಮ್ಮ ಕರ್ತವ್ಯವೆಂದು ಅವರು ಇದೇ ವೇಳೆ ಹೇಳಿದರು.