ಸಿದ್ದಾಪುರ, ಫೆ. 8: ಇತಿಹಾಸ ಪ್ರಸಿದ್ಧ ಪಾಲಿಬೆಟ್ಟದ ಆರ್ಕಾಡ್ ದರ್ಗಾ ಷರೀಫ್‍ನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಹಜರಾತ್ ಪಟ್ಟಾಣ್ ಬಾಬಾಶಾವಲಿ ಅವರ ಹೆಸರಿನಲ್ಲಿ ಪ್ರತಿವರ್ಷ ನಡೆಸುವ ಉರೂಸ್ ಸಮಾರಂಭಕ್ಕೆ ಶುಕ್ರವಾರದಂದು ಚಾಲನೆ ನೀಡಲಾಯಿತು. ನಡೆಯುವ ಉರೂಸ್ ಕಾರ್ಯಕ್ರಮವನ್ನು ಪಾಲಿಬೆಟ್ಟ ಜುಮ್ಮ ಮಸೀದಿಯ ಖತೀಬ್ ಆಲಿ ಸಖಾಫಿ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ನಂತರ ಕಡಲುಂಡಿಯ ಸಯ್ಯದ್ ಶಿಹಾಬುದ್ದೀನ್ ಅವರ ನೇತೃತ್ವದಲ್ಲಿ ಮೌಲೂದ್ ಪಾರಾಯಾಣ ಹಾಗೂ ದುಅದ್ ಪ್ರಾರ್ಥನೆ ನಡೆಯಿತು. ರಾತ್ರಿ ವಾರಣಕ್ಕರದ ಸಯ್ಯದ್ ಸಲಾವುದ್ದೀನ್ ಅಲ್‍ಬುಖಾರಿ ಅವರು ಧಾರ್ಮಿಕ ಉಪನ್ಯಾಸ ಹಾಗೂ ದಿಖ್ರ್ ಮಜ್ಲಿಸ್ ನಡೆಸಿಕೊಟ್ಟರು. ತಾ. 11ರವರೆಗೆ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರರಾಜ್ಯ ಗಳಿಂದಲೂ ಅತ್ಯಧಿಕ ಸಂಖ್ಯೆಯಲ್ಲಿ ಜನ ಭೇಟಿ ನೀಡಿ ಪ್ರಾರ್ಥಿಸುತ್ತಾರೆ.

ತಾ.11ರ ಸಂಜೆ 6.30ಕ್ಕೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ; ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ವಿವಿಧ ವ್ಯಾಪಾರಿಗಳು ವ್ಯಾಪಾರಕ್ಕೆ ಪಾಲಿಬೆಟ್ಟಕ್ಕೆ ಆಗಮಿಸಿದ್ದು, ರಸ್ತೆಯ ಉದ್ದಗಲಕ್ಕೂ ವಿವಿಧ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದಾರೆ.

ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲಿಬೆಟ್ಟ ಜಮಾಅತ್ ಹಾಗೂ ಉರೂಸ್ ಸಮಿತಿಯ ಅಧ್ಯಕ್ಷ ಸಿ.ಎಂ ಅಬ್ದುಲ್ ಜಬ್ಬಾರ್, ಪದಾಧಿಕಾರಿಗಳಾದ ಆಲಿ ಸಖಾಫಿ, ಜಮಾಅತ್ ಕಾರ್ಯದರ್ಶಿ ಖಾಲಿದ್, ಅಬ್ದುಲ್ ರಶೀದ್ ಹಾಗೂ ಅಬೂಬುಕ್ಕರ್ ಇತರರು ಹಾಜರಿದ್ದರು.