ಗೋಣಿಕೊಪ್ಪಲು, ಫೆ.8: ಕಳೆದ ಹಲವು ವರ್ಷಗಳಿಂದ ಕಾನೂರು ವ್ಯಾಪ್ತಿಯ ವಿದ್ಯುತ್ ಗ್ರಾಹಕರು ನಿರಂತರ ವಿದ್ಯುತ್ ವ್ಯತ್ಯಯ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದು, ಇದೀಗ ಪ್ರತಿಭಟನೆಯ ಹಾದಿಯನ್ನು ತುಳಿಯಬೇಕಾಗಿದೆ ಎಂದು ಆ ವಿಭಾಗದ ಗ್ರಾಹಕರು ಎಚ್ಚರಿಸಿದ್ದಾರೆ. ಪೆÇನ್ನಂಪೇಟೆ 66/33/11 ಕೆ.ವಿ.ಸಾಮಥ್ರ್ಯದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನಿರ್ವಹಣೆಯ ವಿದ್ಯುತ್ ವಿತರಣಾ ಕೇಂದ್ರದಿಂದ ನಲ್ಲೂರು-ಬೆಸಗೂರು-ಬಲ್ಯಮಂಡೂರು ಮಾರ್ಗ ಕಾನೂರುವಿಗೆ ವಿದ್ಯುತ್ ಸರಬರಾಜಾಗುತ್ತಿದ್ದು ದಿನಕ್ಕೆ 70ಕ್ಕೂ ಅಧಿಕ ಬಾರಿ ಪವರ್ಕಟ್ ಕಿರಿಕಿರಿಯನ್ನು ಈ ಭಾಗದ ಜನತೆ ಅನುಭವಿಸುತ್ತಾ ಬಂದಿರುವದಾಗಿ ಆರೋಪ ಕೇಳಿ ಬಂದಿದ್ದು ಶೀಘ್ರವೇ ಪೆÇನ್ನಂಪೇಟೆ-ಕಾನೂರು ಮುಖ್ಯರಸ್ತೆ ಮಾರ್ಗ ರೂ.12.64 ಲಕ್ಷವೆಚ್ಚದ ಎಕ್ಸ್ಪ್ರೆಸ್ ವಿದ್ಯುತ್ ಲೇನ್ ಕಾಮಗಾರಿಗೆ ಚಾಲನೆ ನೀಡಲಾಗುವದು ಎಂದು ಗೋಣಿಕೊಪ್ಪಲಿನ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಅಂಕಯ್ಯ ಮಾಹಿತಿ ನೀಡಿದ್ದಾರೆ.
ಕಾನೂರುವಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜರುಗಿದ ಸಂಪರ್ಕ ಸಭೆಯಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಈಗಾಗಲೇ ಎಕ್ಸ್ಪ್ರೆಸ್ ಲೇನ್ ಅಗತ್ಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕ್ರಿಯಾಯೋಜನೆ ಸಿದ್ಧವಾಗಿದೆ. ಮುಂದಿನ ತಿಂಗಳು ಟೆಂಡರ್ ಪ್ರಕ್ರಿಯೆ ನಡೆಯಲಿದ್ದು ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವದು ಎಂದು ಹೇಳಿದರು.
ಕಾನೂರು ವ್ಯಾಪ್ತಿಯಲ್ಲಿ ವಿದ್ಯುತ್ ಓಲ್ಟೇಜ್ ಕೊರತೆ ಹಿನ್ನೆಲೆ ಟಿ.ವಿ.ಕೂಡಾ ನೋಡಲಾಗುತ್ತಿಲ್ಲ. ಮಹಿಳೆಯರು ಮಧ್ಯರಾತ್ರಿಯಲ್ಲಿ ಎದ್ದು ‘ಮಿಕ್ಸಿ’ ರುಬ್ಬುವ ಕೆಲಸ ಮಾಡುವಂತಾಗಿದೆ. ಕಾಫಿ, ಕಾಳುಮೆಣಸು ಇತ್ಯಾದಿಗಳಿಗೆ ವರ್ಷದ ಮೂರು ತಿಂಗಳು ತುಂತುರು ನೀರಾವರಿ ಮಾಡಬೇಕಾಗಿರುವದು ಅನಿವಾರ್ಯವಾಗಿದ್ದು, ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದೆ ಕಾಫಿ ಕೃಷಿಕರೂ ತೊಂದರೆಗೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ತುರ್ತು ಅಗತ್ಯ ವಿದ್ಯುತ್ ಪೂರೈಸುವಂತೆ ಕಾನೂರು ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಗಾಳಿಯಂತ್ರ ಸ್ಥಾಪಿಸುತ್ತೇವೆ?
‘ಕಾನೂರು ಭಾಗಕ್ಕೆ ಅಗತ್ಯ ವಿದ್ಯುತ್ ಸರಬರಾಜು ಸಾಧ್ಯವಿಲ್ಲದಿದ್ದರೆ ಹೇಳಿಬಿಡಿ. ನಮಗೆ ನಿಮ್ಮ ವಿದ್ಯುತ್ ಅಗತ್ಯವಿಲ್ಲ. ಇಡೀ ಕಾನೂರು ಗ್ರಾಮವನ್ನು ‘ಸೋಲಾರ್ ಗ್ರಾಮ’ವಾಗಿ ಪರಿವರ್ತನೆ ಮಾಡಿಕೊಳ್ಳುತ್ತೇವೆ, ಇಲ್ಲವೇ ಗಾಳಿಯಂತ್ರ ಸ್ಥಾಪನೆ ಮಾಡಿ ಅಗತ್ಯ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುತ್ತೇವೆ’ ಎಂದು ಕಾನೂರು ಪ್ರಮುಖ ಹಾಗೂ ಪೆÇನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ರಾಜೀವ್ಬೋಪಯ್ಯ ಅವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇನ್ನೆರಡು ದಿನದಲ್ಲಿ ಕಾನೂರು ಗ್ರಾಮಕ್ಕೆ ಅಗತ್ಯ ವಿದ್ಯುತ್ ಪೂರೈಕೆ ಆಗದಿದ್ದಲ್ಲಿ ಗೋಣಿಕೊಪ್ಪಲು ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಗೂ ಅಧಿಕಾರಿಗಳನ್ನು ದಿಗ್ಭಂಧನದಲ್ಲಿರಿಸಿ ಮೇಲಾಧಿಕಾರಿಗಳಾದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಯ ಅಧೀಕ್ಷಕ ಬಿ.ಎಸ್.ಉಮೇಶ್ ಹಾಗೂ ಕೊಡಗು ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ಸ್ಥಳಕ್ಕೆ ಆಗಮಿಸಲು ಒತ್ತಾಯಿಸಿ, ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ರಾಜೀವ್ಬೋಪಯ್ಯ ಎಚ್ಚರಿಕೆ ನೀಡಿದರು.
ಇದೇ ಸಂದರ್ಭ ಕಾನೂರುವಿನ ಎಂ.ಎಸ್. ಗಣೇಶ್ ಎಂಬವರು ಯಾವದೇ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳದಿದ್ದರೂ, ರೂ.49,000 ಮೊತ್ತದ ಬಿಲ್ ಬಂದಿರುವದಾಗಿ ಬಿ.ಎಸ್.ಕೃಷ್ಣಪ್ಪ ಅವರು ಸಹಾಯಕ ಕಾರ್ಯಪಾಲಕ ಅಭಿಯಂತರ ಅಂಕಯ್ಯ ಅವರಿಗೆ ಬಿಲ್ ತೋರಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷಿ - ಬೆಕ್ಕುಗಳಿಂದ ವಿದ್ಯುತ್ ಕಟ್!
ಬಾವಲಿ, ಗೂಬೆ ಇತ್ಯಾದಿ ಪಕ್ಷಿಗಳು ಮತ್ತು ಕಾಡುಬೆಕ್ಕುಗಳು ರಾತ್ರಿ ಟ್ರಾನ್ಸ್ಫಾರ್ಮರ್ ಸಮೀಪದ ವಿದ್ಯುತ್ ತಂತಿಗಳಿಗೆ ಸಿಲುಕುವದರಿಂದ ಕಾನೂರು ಗ್ರಾಮಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಕಾನೂರು ವ್ಯಾಪ್ತಿಯ ಕಿರಿಯ ಅಭಿಯಂತರ ಮನುಕುಮಾರ್ ಉತ್ತರಿಸಿದ ಸಂದರ್ಭ ಗ್ರಾಹಕರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಪ್ರತಿನಿತ್ಯ ಪಕ್ಷಿಗಳು, ಬೆಕ್ಕುಗಳು ವಿದ್ಯುತ್ ತಂತಿಗೆ ಸಿಲುಕುತ್ತವೆಯೇ, ಹಗಲು ಹೊತ್ತಿನಲ್ಲಿಯೇ ಸುಮಾರು 70ಕ್ಕೂ ಅಧಿಕ ಬಾರಿ ಪವರ್ ಕಟ್ ಉಂಟಾಗಿದೆ. ಪೆÇನ್ನಂಪೇಟೆಯಿಂದ ಕಾನೂರು ಗ್ರಾಮದ ವರೆಗೆ ಸುಮಾರು 100ಕ್ಕೂ ಅಧಿಕ ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದ್ದು, ಅಗತ್ಯ ವಿದ್ಯುತ್ ಸರಬರಾಜು ಮಾಡದಿರುವದೇ ‘ಓಲ್ಟೇಜ್ ಡ್ರಾಪ್’ಗೆ ಕಾರಣ. ಕಾಫಿಯೇ ನಮ್ಮ ಬದುಕು. ವರ್ಷದಲ್ಲಿ ಕೇವಲ ಮೂರು ತಿಂಗಳು ನಮಗೆ ಸಮರ್ಪಕ ವಿದ್ಯುತ್ ಸಿಗದಿದ್ದರೆ, ನೀರಾವರಿ ಹೇಗೆ?. ಕೊಡಗಿನ ಜನ ಮಂಡ್ಯದ ಮಾದರಿ ವಾರ್ಷಿಕ ಮೂರು ನಾಲ್ಕು ಬೆಳೆ ತೆಗೆಯುತ್ತಿಲ್ಲ. ಕಾಫಿ, ಕಾಳು ಮೆಣಸು ಹಾಗೂ ಭತ್ತವನ್ನೂ ಕೂಡಾ ವಾರ್ಷಿಕವಾಗಿ ಒಮ್ಮೆ ಮಾತ್ರಾ ಕೊಯ್ಲು ಮಾಡುವದು ಎಂದು ನಂದಾ ಕಾರ್ಯಪ್ಪ ಮುಂತಾದವರು ಆರೋಪಿಸಿದರು.
ಸೆಸ್ಕ್ ಲೈನ್ಮೆನ್ಗಳು ಕರೆಗೆ ಸಿಗುತ್ತಿಲ್ಲ. ಮೊಬೈಲ್ ವ್ಯಾಪ್ತಿ ಪ್ರದೇಶದ ಹೊರಗೆ ಅವಿತಿಟ್ಟುಕೊಳ್ಳುತ್ತಾರೆ ಎಂಬ ಆರೋಪವೂ ಕೇಳಿ ಬಂತು. ಮಳೆಹಾನಿ ಪರಿಹಾರವಾಗಿ ಕಾನೂರುವಿಗೆ ನೂರಾರು ವಿದ್ಯುತ್ ಕಂಬಗಳು ಬಂದಿದ್ದರೂ ಅಳವಡಿಕೆಯಾಗದೆ ನಾಪತ್ತೆಯಾಗಿದೆ. ಹಲವು ಕಡೆಗಳಲ್ಲಿ ಮನೆಯಮೇಲೆ ಹಾಗೂ ಕೈಗೆಟುಕುವಂತೆ ವಿದ್ಯುತ್ ಲೇನುಗಳು ಹಾದುಹೋಗಿವೆ. ನಿಡುಗುಂಬದಲ್ಲಿ ಮರದ ಕಂಬದಲ್ಲಿಯೇ ವಿದ್ಯುತ್ ಲೇನ್ ಇದ್ದು, ಅಪಾಯದಲ್ಲಿದೆ. ಹಲವು ಗ್ರಾಮ ಸಭ್ರೆಗಳಲ್ಲಿ ಈ ಬಗ್ಗೆ ಪ್ರಸ್ತಾಪವಾದರೂ ಕಂಬ ಬದಲಾವಣೆ ಮಾಡಿಲ್ಲ.
ನಾಗರಹೊಳೆ ಅಭಯಾರಣ್ಯ ಸರಹದ್ದಿನಲ್ಲಿ ‘ಆನೆ ಕಾರಿಡಾರ್’ ಪ್ರದೇಶದಲ್ಲಿ ಎತ್ತರದ ವಿದ್ಯುತ್ ಕಂಬ ಅಳವಡಿಸಲು ಅರಣ್ಯ ಇಲಾಖೆಯ ವಿಶೇಷ ಅನುದಾನವಿದ್ದು, ಅದನ್ನಾದರೂ ಬಳಸಿಕೊಂಡು ಸಮರ್ಪಕ ವಿದ್ಯುತ್ ಲೇನ್ ಅಳವಡಿಸಲು ಸಾಧ್ಯವಿದೆ. ಈಗಾದಲ್ಲಿ ಮರದ ರೆಂಬೆ ಅಥವಾ ಇನ್ನಾವದೇ ಕಾರಣಕ್ಕೆ ‘ವಿದ್ಯುತ್ ಟ್ರಿಪ್’ ಆಗುವ ಸಮಸ್ಯೆ ಇರುವದಿಲ್ಲ.
ಕಾನೂರು ಗ್ರಾಮದ ಹಲವರು ತಮ್ಮ ಸಮಸ್ಯೆಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರ ಅಂಕಯ್ಯ ಅವರಲ್ಲಿ ಹಂಚಿಕೊಂಡ ಸಂದರ್ಭ ‘ಓವರ್ ಓಲ್ಟೇಜ್’ ಅಥವಾ
ವಿದ್ಯುತ್ ಸರಬರಾಜು ಸಮಸ್ಯೆಯನ್ನು ಎರಡು ದಿನಗಳಲ್ಲಿ ಪರಿಹಾರ ಮಾಡುವ ಭರವಸೆ ನೀಡಿದ್ದು, ಸ್ಪಂದಿಸಿದ ಗ್ರಾಮಸ್ಥರು ಕಾನೂರು ಕಿರಿಯ ಅಭಿಯಂತರ ಹಾಗೂ ಲೈನ್ ಮೆನ್ ಗಳು ಗ್ರಾಮಸ್ಥರ ಕರೆಗೆ ಸಿಗುತ್ತಿಲ್ಲ ಎಂದು ದೂರಿದ ಮೇರೆ, ಇನ್ನು ಮುಂದೆ ಈಗಾಗುವದಿಲ್ಲ ಎಂದು ಅಂಕಯ್ಯ ಭರವಸೆ ನೀಡಿದರು.
ಸಭೆಯಲ್ಲಿ ಕಾನೂರು ಪ್ರಮುಖರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಕಾಡ್ಯಮಾಡ ಬೋಪಣ್ಣ, ಕಾಡ್ಯಮಾಡ ಮಧು,ಕಂದಾ ಭೀಮಯ್ಯ, ನವೀನ್, ಕೆ.ಆರ್.ಸತೀಶ್, ಚಿರಿಯಪಂಡ ಈಶ್, ಕುಂಜ್ಞಾಮಾಡ ಹರೀಶ್, ಅಣ್ಣಳಮಾಡ ಅಚ್ಚಯ್ಯ, ನರೇಂದ್ರ, ಕೆ.ಜಿ.ರಾಜೇಶ್, ಬಿದ್ದಪ್ಪ ಮುಂತಾದವರು ಪಾಲ್ಗೊಂಡಿದ್ದರು.
-ಟಿ.ಎಲ್.ಶ್ರೀನಿವಾಸ್