ಮಡಿಕೇರಿ ಫೆ.8 : ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವತಿಯಿಂದ 61 ಮಂದಿ ಮಳೆಹಾನಿ ಸಂತ್ರಸ್ತರಿಗೆ 8.53 ಲಕ್ಷ ರೂ. ಆರ್ಥಿಕ ನೆರವು ವಿತರಣೆ ಮತ್ತು ಗ್ರಾಹಕರ ಸಮಾವೇಶ ಫೆ.19 ರಂದು ನಗರದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸೊಸೈಟಿ ಅಧ್ಯಕ್ಷರಾದ ಕೆ.ಸಿ.ನಾರಾಯಣ ಗೌಡ, ಅಂದು ಬೆಳಿಗ್ಗೆ 10.30ಕ್ಕೆ ನಗರದ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಮಡಿಕೇರಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪಿ.ಸಿ. ಜಯರಾಮ, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪೂರ್ವಾಧ್ಯಕ್ಷರಾದ ಜಾಕೆ ಸದಾನಂದ, ಎ.ವಿ. ತೀರ್ಥರಾಮ ಹಾಗೂ ಪುತ್ತೂರು ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಾ ಕೋಲ್ಚಾರು, ಸುಳ್ಯದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ ಭಾಗವಹಿಸಲಿದ್ದಾರೆ ಎಂದರು.
ಗ್ರಾಹಕರ ಸಮಾವೇಶ: ಇದೇ ಸಂದರ್ಭ ಮಡಿಕೇರಿ ಶಾಖೆಯ ಗ್ರಾಹಕರ ಸಮಾವೇಶ ಆಯೋಜಿಸಲಾಗಿದ್ದು, ಇದರಲ್ಲಿ ಸಂಸ್ಥೆಯ ಸವಲತ್ತುಗಳ ಬಗ್ಗೆ ಗ್ರಾಹಕರಿಗೆ ಮಾಹಿತಿಯನ್ನು ನೀಡಿ. ಇದರ ಬೆಳವಣಿಗೆಗೆ ಎಲ್ಲರ ಸಹಕಾರವನ್ನು ಕೋರಲಾಗುವದು. ಮಡಿಕೇರಿ ಶಾಖೆಯು 2015 ಜೂನ್ 21 ರಂದು ಪ್ರಾರಂಭವಾಗಿದ್ದು, ಪ್ರಸ್ತುತ ಶಾಖೆಯಲ್ಲಿ 950 ಸದಸ್ಯರಿದ್ದಾರೆ. 6.75 ಕೋಟಿ ರೂ.ಗಳಷ್ಟು ಠೇವಣಿ ಸಂಗ್ರಹಿಸಿ, 5.10 ಕೋಟಿ ರೂ.ಗಳಷ್ಟು ್ಟ ವಿವಿಧ ಸಾಲಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯು ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಈಗಾಗಲೇ 10 ಶಾಖೆಗಳನ್ನು ಪ್ರಾರಂಭಿಸಿ ವ್ಯವಹಾರ ನಡೆಸುತ್ತಿದೆ. ವಾರ್ಷಿಕ 250 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದು, 2017-18ನೇ ಸಾಲಿನಲ್ಲಿ ರೂ. 92.23 ಲಕ್ಷ ನಿವ್ವಳ ಲಾಭಗಳಿಸಿರುತ್ತದೆ. ಈ ಲಾಭದಲ್ಲಿ ಕೊಡಗಿನ ನೆರೆ ಸಂತ್ರಸ್ತರಿಗೆ ರೂ.8.53 ಲಕ್ಷಗಳನ್ನು ಪರಿಹಾರಕ್ಕೆಂದು ವಿಂಗಡಿಸಿದ್ದು, ಇದನ್ನು ಈಗಾಗಲೇ ಸಂಸ್ಥೆಗೆ ಮನವಿ ಸಲ್ಲಿಸಿದ ಆಯ್ದ ನೆರೆ ಸಂತ್ರಸ್ತರಿಗೆ ವಿತರಿಸಲಾಗುತ್ತಿದೆ ಎಂದು ಕೆ.ಸಿ.ನಾರಾಯಣ ಗೌಡ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಪಿ.ಎಸ್.ಗಂಗಾಧರ, ಆಡಳಿತ ಮಂಡಳಿಯ ಸದಸ್ಯರಾದ ಪಿ.ಸಿ. ಜಯರಾಮ, ಸಲಹಾ ಸಮಿತಿಯ ಸದಸ್ಯರಾದ ನವೀನ್ ಅಂಬೆಕಲ್ಲು, ಕೇಶವಾನಂದ ಯಾಲದಾಳು ಹಾಗೂ ವೆಂಕಟ್ರಮಣ ಗೌಡ ಪಡ್ಪು ಉಪಸ್ಥಿತರಿದ್ದರು.