ನಾಪೆÇೀಕ್ಲು, ಫೆ. 8: ಯಾವದೇ ಜಾತಿ, ಧರ್ಮದವರಾಗಲಿ ದೇವರನ್ನು ನಂಬುವದರಿಂದ, ಭಗವಂತನ ನಾಮ ಸ್ಮರಣೆ ಮಾಡುವದರಿಂದ, ಭಯ ಭಕ್ತಿಯಿಂದ, ನೆಮ್ಮದಿಯ ಜೀವನ ಸಾಗಿಸಬಹುದು. ಇದರಿಂದ ಸ್ವಾಸ್ಥ್ಯ, ಶಾಂತಿಯುತ ಸಮಾಜ ನಿರ್ಮಾಣ ವಾಗುತ್ತದೆ ಎಂಬ ಮಾತೊಂದಿದೆ. ಅದರೊಂದಿಗೆ ಆಧುನಿಕ, ವೈಜ್ಞಾನಿಕ ಯುಗದಲ್ಲಿಯೂ ತಾವು ನಂಬಿದ ತಮ್ಮ ಗ್ರಾಮ ದೇವತೆಗಳ, ದೇವಳಗಳ ಜೀರ್ಣೋದ್ಧಾರಕ್ಕೆ ಎಲ್ಲರೂ ಕೈಜೋಡಿಸುತ್ತಿರುವದು ಗ್ರಾಮಗಳಲ್ಲಿ ಸಾಮರಸ್ಯ, ಶಾಂತಿ ಉಂಟಾಗಲು ಕಾರಣವಾಗಿದೆ.

ಇದಕ್ಕೆ ಉದಾಹರಣೆ: ಕಡಂಗ ಸಮೀಪದ ಅರಪಟ್ಟು ಗ್ರಾಮ ದಲ್ಲಿರುವ ಕಡಿಯತ್‍ನಾಡು ಶ್ರೀ ಸೋಲಿ ಭಗವತಿ ದೇವಳ. ಸುಮಾರು 700 ವರ್ಷಗಳ ಪುರಾತನ ಇತಿಹಾಸವಿರುವ ಈ ದೇವಳದ ಉಸ್ತುವಾರಿಯನ್ನು ಹಿಂದೆ ಅರಪಟ್ಟು ಗ್ರಾಮದ 50 ಮತ್ತು ಪೆÇದವಾಡ ಗ್ರಾಮದ 90 ಕುಟುಂಬಸ್ಥರು ವಹಿಸಿದ್ದರು,. ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮದಲ್ಲಿ ಜನ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಈಗ 20 ಕುಟುಂಬಸ್ಥರು ಮಾತ್ರ ಇದರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೂ ಗ್ರಾಮಸ್ಥರ, ದಾನಿಗಳ ಸಹಕಾರದಿಂದ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನೂತನ ಶಿಲಾ ಗರ್ಭಗುಡಿ, ನಮಸ್ಕಾರ ಮಂಟಪ ನಿರ್ಮಿಸುವದರೊಂದಿಗೆ ತಮ್ಮ ದೇವಿಯ ಮೇಲಿನ ಭಕ್ತಿಗೆ ಸಾಕ್ಷಿಭೂತರಾಗಿದ್ದಾರೆ.

ಇತಿಹಾಸ: 700 ವರ್ಷಗಳ ಹಿಂದೆ ಕೇರಳ ರಾಜ್ಯದ ಚೋಯಿಲಿ ಎಂಬ ಊರಿನಿಂದ ಕೊಡಗಿಗೆ ಆಗಮಿಸಿದ ಶ್ರೀ ಭಗವತಿ ದೇವಿಯು ಮೊದಲಿಗೆ ಕಿರುಂದಾಡು, ನಂತರ ಅರಪಟ್ಟು, ಅನಂತರ ಕೋಕೇರಿ ಗ್ರಾಮದಲ್ಲಿ ನೆಲೆಸಿದಳು ಎಂಬ ಪ್ರತೀತಿ ಇದೆ. ಇದರಿಂದಾಗಿ ಅರಪಟ್ಟು ಶ್ರೀ ಭಗವತಿ ದೇವಿಯನ್ನು ಬೋಯಿಲಿ ಭಗವತಿ, ಸೋಲಿ ಭಗವತಿ ಎಂದು ಕರೆಯಲಾಗುತ್ತಿದೆ. ದೇವಿಯೊಂದಿಗೆ ಕೇರಳ ರಾಜ್ಯದಿಂದ ಕಿರುಂದಾಡು ಗ್ರಾಮದ ಮಲೆಯರು, ಅರಪಟ್ಟು ಗ್ರಾಮದ ಕಣಿಯರು, ಪೆÇದವಾಡ ಗ್ರಾಮದ ಬಣ್ಣರು ಮತ್ತು ಕೋಕೇರಿ ಗ್ರಾಮದ ಪಾಲೆ ಜನಾಂಗದವರು ಬಂದು ನೆಲೆಸಿದರು. ಇವರು ಈ ದೇವಿಯ ಸೇವೆ ಮಾಡುವವ ರಾಗಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಅರಪಟ್ಟು ಗ್ರಾಮದ ಭಗವತಿ ದೇವಿಯ ಎಡ ಭಾಗದಲ್ಲಿ ವಿಷ್ಣು ಮೂರ್ತಿ, ಬಲಭಾಗದಲ್ಲಿ ಮಂದಣ ಮೂರ್ತಿ ದೈವಗಳಿದ್ದು, ಕಣಿಯ ಜನಾಂಗದವರು ಮಂದಣ ಮೂರ್ತಿ ದೇವರ ಎಲ್ಲಾ ಪೂಜಾ ವಿಧಿ ವಿಧಾನ ಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಹಿಂದೆ ಅರಪಟ್ಟು ಭಗವತಿ ದೇವಳದಲ್ಲಿ ನಾಡಿಗೆ ಸಂಬಂಧಿಸಿ ದಂತೆ ಕೈಲು ಮುಹೂರ್ತ ಮತ್ತು ಹುತ್ತರಿ ಹಬ್ಬಗಳನ್ನು ಕಣಿಯರ ಕುಟುಂಬದ ಜ್ಯೋತಿಷ್ಯರು ನಿಗದಿಪಡಿಸುತ್ತಿದ್ದರು. ಈಗ ಜ್ಯೋತಿಷ್ಯದ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದ ಕಾರಣ ಅದನ್ನು ನಿಲ್ಲಿಸಲಾಗಿದೆ ಎನ್ನುತ್ತಾರೆ ಗ್ರಾಮಸ್ಥರಾದ ಕಣಿಯರ ಪ್ರಕಾಶ್.

30 ವರ್ಷಗಳ ಹಿಂದೆ ಈ ದೇವಳವನ್ನು ನವೀಕರಿಸಲಾಗಿತ್ತು. ಈಗ ಮತ್ತೆ ದೇವಿಯ ಗರ್ಭಗುಡಿ, ನಮಸ್ಕಾರ ಮಂಟಪ, ಗಣಪತಿ ಗುಡಿ ಮತ್ತು ಸುಬ್ರಹ್ಮಣ್ಯ ಗುಡಿಗಳನ್ನು ಪೂರ್ತಿ ಶಿಲೆಯಿಂದ ನಿರ್ಮಿಸಲಾಗಿದೆ. ಇಲ್ಲಿ ಮೂಲ ದೇವರು ಶ್ರೀ ಭಗವತಿ ಯಾಗಿದ್ದು, ಎಲ್ಲಾ ದೇವಳಗಳಲ್ಲಿ ರುವಂತೆ ವಿಘ್ನ ವಿನಾಶಕ ಗಣಪತಿಯ ಗುಡಿಯಿದೆ. ಈಗ ನೂತನವಾಗಿ ಸುಬ್ರಹ್ಮಣ್ಯ ಗುಡಿ ನಿರ್ಮಿಸಿ ದೇವರನ್ನು ಪ್ರತಿಷ್ಠಾಪಿಸು ವದರೊಂದಿಗೆ ಆಧಿಶಕ್ತಿಯೊಂದಿಗೆ ಗಣಪತಿ ಮತ್ತು ಸುಬ್ರಹ್ಮಣ್ಯನನ್ನು ಒಂದೇ ದೇಗುಲದಲ್ಲಿ ಪೂಜಿಸುವ ಭಾಗ್ಯ ಭಕ್ತರಿಗೆ ಲಭಿಸಲಿದೆ.

ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಪಾರಂಪರಿಕ ಜ್ಯೋತಿಷ್ಯರಾದ ಕಣಿಯರ ಶಶಿ ಕುಮಾರ್, ಕಾಸರಗೋಡುವಿನ ಶಿಲ್ಪಿ ರಮೇಶ್ ಕಾರಂತ್ ಮತ್ತು ಶಿಲಾಶಿಲ್ಪಿ ಉಪ್ಪಿನಂಗಡಿಯ ರಾಜೇಂದ್ರ ಕಾರ್ಯನಿರ್ವಹಿಸಿದ್ದಾರೆ.

ನಾಡು ದೇವಸ್ಥಾನ: ಪಟ್ಟೋಳ ಪಳಮೆ ಪುಸ್ತಕದಲ್ಲಿ ಉಲ್ಲೇಖವಿರುವಂತೆ ಅಮ್ಮತ್ತಿ ನಾಡಿನ ಕುಲ್ಲಚಂಡ ಚೋಂದು ಎಂಬವರು ವೀರರಾಗಿದ್ದು, ಎಲ್ಲಾ ದೇವಸ್ಥಾನಕ್ಕೆ ತೆರಳಿ ತನ್ನನ್ನು ಸೋಲಿಸುವ ವೀರರನ್ನು ಮಲ್ಲ ಯುದ್ಧಕ್ಕೆ ಆಹ್ವಾನಿಸುತ್ತಿದ್ದರಂತೆ. ಅವರನ್ನು ಸೋಲಿಸಿದರೆ ಅದು ನಾಡು ದೇವಸ್ಥಾನ ಎಂದು ಒಪ್ಪಿಕೊಳ್ಳುತ್ತಿ ದ್ದರಂತೆ. ಇಲ್ಲವಾದರೆ ಅವರು ಹೇಳಿದಂತೆ ನಡೆದುಕೊಳ್ಳಬೇಕಿತ್ತಂತೆ. ಅದರಂತೆ ಅರಪಟ್ಟು ದೇವಳದಲ್ಲಿ ಪಂದ್ಯ ನಡೆಸಿದಾಗ ಪೆÇದವಾಡ ಗ್ರಾಮದ ಕೈಯಂದಿರ ಅಯ್ಯಪ್ಪ ಎಂಬ ಯುವಕ ಚೋಂದು ಅವರನ್ನು ಸೋಲಿಸಿದ ಕಾರಣ ಅರಪಟ್ಟು ಭಗವತಿ ದೇವಳಕ್ಕೆ ನಾಡು ದೇವಸ್ಥಾನ ಪಟ್ಟ ದೊರೆಯಿತು ಎಂದು ಹೇಳಲಾಗಿದೆ.

ದೈವಭಕ್ತಿ: ಇಲ್ಲಿನ ಭಗವತಿ ವೈಷ್ಣವಿ ಆಗಿರುವದರಿಂದ ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ, ವಿದ್ಯಾರಂಭಕ್ಕೆ ಇಲ್ಲಿ ಹೆಚ್ಚಿನ ಮಹತ್ವವಿದೆ. ದೇವಳದ ತಕ್ಕಮುಖ್ಯಸ್ಥರಾಗಿ ಮುಕ್ಕಾಟಿರ ಕುಟುಂಬಸ್ಥರು ಕಾರ್ಯನಿರ್ವ ಹಿಸುತ್ತಿದ್ದು, ಆಡಳಿತ ಮಂಡಳಿ ಅಧ್ಯಕ್ಷರಾಗಿ ನೆರಪಂಡ ಚಿತ್ರ ಬೆಳ್ಯಪ್ಪ, ಉಪಾಧ್ಯಕ್ಷರಾಗಿ ಕುಲ್ಲಚಂಡ ಋಷಿ ಪೂವಯ್ಯ, ಕಾರ್ಯದರ್ಶಿಯಾಗಿ ಕಣಿಯರ ಪ್ರಕಾಶ್, ಖಜಾಂಚಿಯಾಗಿ ಕೋಡಿರ ಪ್ರಸನ್ನ ಹಾಗೂ ಪ್ರತೀ ಕುಟುಂಬದ ಒಬ್ಬರಂತೆ 18 ಜನ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಲ್ಲಿ ವಾರ್ಷಿಕ ಉತ್ಸವವು ಮಾರ್ಚ್ 21ರಿಂದ 28ರ ವರೆಗೆ ವಿಜ್ರಂಭಣೆಯಿಂದ ನಡೆಯುತ್ತದೆ. ದೇವಳದ ಜೀರ್ಣೋದ್ಧಾರಕ್ಕೆ ಸಹಕರಿಸುವವರು ಈ ಕೆಳಗಿನ ಮೊ. ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ. 9448896106, 9482193033.

- ಪಿ.ವಿ. ಪ್ರಭಾಕರ್