ಮಡಿಕೇರಿ, ಫೆ. 8 : ಪ್ರಸ್ತುತ ಇಡೀ ವಿಶ್ವದಲ್ಲಿ ಶುಧ್ದ ಕುಡಿಯುವ ನೀರಿನ ಪ್ರಮಾಣ ಇರುವದು ಶೇ.2.75 ಮಾತ್ರವಾಗಿದ್ದು, ಆದಷ್ಟು ಮಳೆಯ ನೀರನ್ನು ಸಂಗ್ರಹಣೆ ಮಾಡಬೇಕಾಗುತ್ತದೆ. ಇದಕ್ಕೆ ಇಂಗು ಗುಂಡಿಗಳ ನಿರ್ಮಾಣ ಅಗತ್ಯವಿದೆ ಎಂದು ಪೊನ್ನಂಪೇಟೆಯ ಕೊಡಗು ತಾಂತ್ರಿಕ ವಿದ್ಯಾನಿಲಯದ ಅಸಿಸ್ಟೆಂಟ್ ಪ್ರೊಪೆಸರ್ ಎಚ್.ಡಿ. ರೋಜ ಹೇಳಿದರು.

ಬೆಂಗಳೂರು ಅಂತರ್ಜಲ ನಿರ್ದೇಶನಾಲಯ ಹಾಗೂ ಕೊಡಗು ಜಿಲ್ಲಾ ಅಂತರ್ಜಲ ಕಚೇರಿ ವತಿಯಿಂದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತರ್ಜಲ ಜಾಗೃತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಪವರ್ ಪೊಯಿಂಟ್‍ನ ಮೂಲಕ ನೀರಿನ ಸದ್ಬಳಕೆ, ಸಂರಕ್ಷಣೆ, ಮರುಬಳಕೆ, ನಿರ್ವಹಣೆ ಮತ್ತು ಅತಿಬಳಕೆ ನಿಯಂತ್ರಣ, ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳದಂತೆ ಜಾಗರೂಕತೆ ಹಾಗೂ ಅಂತರ್ಜಲ ಮಾಲಿನ್ಯ ನಿಯಂತ್ರಣ ಕುರಿತು ವಿವರಣೆ ನೀಡಿದರು. ಶುಧ್ದ ಕುಡಿಯುವ ನೀರಿನ ಪ್ರಮಾಣ ಕಡಿಮೆ ಇರುವದರಿಂದ ಜನರು ನೀರಿನ ಮಿತ ಬಳಕೆ ಮತ್ತು ರಕ್ಷಣೆಗೆ ಮುಂದಾಗಬೇಕು ಎಂದು ಅವರು ತಿಳಿಸಿದರು.

ಅತಿಯಾದ ಕೊಳವೆ ಬಾವಿಗಳಿಂದ ಇಂದು ಅಂತರ್ಜಲ ನಾಶವಾಗುತ್ತಿದೆ ಮತ್ತು ತ್ಯಾಜ್ಯ ವಿಲೇವಾರಿಯಲ್ಲಿ ಜನರ ನಿರ್ಲಕ್ಷ್ಯತೆಯಿಂದ ಅಂತರ್ಜಲದ ನೀರು ಅಶುಧ್ದಗೊಳ್ಳುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.